ಗಾನ ಕೋಗಿಲೆ ಎಸ್‌. ಜಾನಕಿ ಇನ್ನಿಲ್ಲ

ಟಾ (4)

ಮೈಸೂರು: ಭಾರತೀಯ ಸಂಗೀತ ಲೋಕದ ಅಪರೂಪದ ಧ್ವನಿಯಾಗಿದ್ದ, “ಗಾನ ಕೋಗಿಲೆ” ಎಂದೇ ಖ್ಯಾತರಾದ ಹಿರಿಯ ಹಿನ್ನೆಲೆ ಗಾಯಕಿ ಎಸ್‌. ಜಾನಕಿ (88) ಅವರು ವಿಧಿವಶರಾಗಿದ್ದಾರೆ. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಎಸ್‌. ಜಾನಕಿ ಅವರ ನಿಧನದೊಂದಿಗೆ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ. ತಮ್ಮ ಅದ್ಭುತ ಕಂಠಸಿರಿ, ಗಾಯನ ಮತ್ತು ವಿಭಿನ್ನ ಶೈಲಿಯ ಮೂಲಕ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದ ಜಾನಕಿ ಅಮ್ಮ ಅವರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದಿದೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಎಸ್‌. ಜಾನಕಿ ಅವರು ಬಾಲ್ಯದಿಂದಲೇ ಸಂಗೀತದತ್ತ ಅಪಾರ ಆಸಕ್ತಿ ಹೊಂದಿದ್ದರು. ತಮ್ಮ 19ನೇ ವಯಸ್ಸಿನಲ್ಲಿ 1957ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ‘ವಿಧಿಯಿನ್ ವಿಲಾಯಟ್ಟು’ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಅವರ ಸಂಗೀತ ಪಯಣ ಆರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯಿತು.

ಎಸ್‌. ಜಾನಕಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಚಲನಚಿತ್ರಗಳು, ಆಲ್ಬಮ್‌ಗಳು, ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳಿಗಾಗಿ ಅವರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.

ಭಾಷೆಯ ಗಡಿ ಮೀರಿ ತಮ್ಮ ಧ್ವನಿಯ ಮೂಲಕ ಜನರನ್ನು ಸೆಳೆದಿದ್ದ ಜಾನಕಿ ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಕನ್ನಡದಲ್ಲಿ ಅವರು ಹಾಡಿದ ಅನೇಕ ಗೀತೆಗಳು ಇಂದಿಗೂ ಸಂಗೀತ ಪ್ರಿಯರ ಮನಸ್ಸಿನಲ್ಲಿ ಜೀವಂತವಾಗಿವೆ. 

ಜಾನಕಿ ಅವರನ್ನು ಅಭಿವ್ಯಕ್ತಿ ಮತ್ತು ಭಾವನೆಯ ರಾಣಿ ಎಂದು ಸಂಗೀತ ಲೋಕದಲ್ಲಿ ಗೌರವಿಸಲಾಗುತ್ತಿತ್ತು. ಪ್ರೀತಿ, ನೋವು, ಸಂತೋಷ, ಭಕ್ತಿ ಸೇರಿದಂತೆ ಯಾವುದೇ ಭಾವನೆಗೂ ಜೀವ ತುಂಬುವ ರೀತಿಯಲ್ಲಿ ಹಾಡುವ ವಿಶೇಷ ಪ್ರತಿಭೆ ಅವರಿಗಿತ್ತು.

ಅವರು ಸಂಗೀತ ವೃತ್ತಿಜೀವನದಲ್ಲಿ ಎಸ್‌. ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಗೌರವಗಳನ್ನು ಅವರು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಸಂದಿವೆ.

2016ರಲ್ಲಿ ಅವರು ಚಲನಚಿತ್ರ ಹಾಗೂ ವೇದಿಕೆ ಕಾರ್ಯಕ್ರಮಗಳಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಸಂಗೀತದ ಮೇಲಿನ ಪ್ರೀತಿಯಿಂದ 2018ರಲ್ಲಿ ಮತ್ತೆ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಎಸ್‌. ಜಾನಕಿ ಅವರ ಸಾಧನೆ ಕೇವಲ ಹಾಡುಗಳ ಸಂಖ್ಯೆಗೆ ಸೀಮಿತವಾಗಿರಲಿಲ್ಲ. ತಮ್ಮ ವಿಶಿಷ್ಟ ಧ್ವನಿ, ಸಂಗೀತದ ಮೇಲಿನ ಬದ್ಧತೆ ಮತ್ತು ಭಾವಪೂರ್ಣ ಗಾಯನದ ಮೂಲಕ ಅವರು ಭಾರತೀಯ ಸಂಗೀತ ಪರಂಪರೆಯಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದಾರೆ.

2013ರಲ್ಲಿ ಭಾರತ ಸರ್ಕಾರ ನೀಡಲು ಮುಂದಾಗಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು. ಸರಳ ಜೀವನ ಮತ್ತು ಸಂಗೀತದ ಮೇಲಿನ ಅಪಾರ ಪ್ರೀತಿಯಿಂದ ಗುರುತಿಸಿಕೊಂಡಿದ್ದ ಜಾನಕಿ ಅಮ್ಮ ಇಂದು ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ.

Exit mobile version