ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಧೀರ ರಾಕ್‌ಲೈನ್ ವೆಂಕಟೇಶ್ ರೀತಿ ಆ ಕುಟುಂಬದ ಕುಡಿ ಕೂಡ ವೆರಿ ಟ್ಯಾಲೆಂಟೆಡ್. ಯೆಸ್.. ಮುನಿರತ್ನ ಹಾಗೂ ರಾಕ್‌ಲೈನ್ ಮೊಮ್ಮಗ ವಿಶ್ವ ಮಟ್ಟದ ಸಾಧನೆ ಮಾಡಿದ್ದಾರೆ. ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್‌ನ ಅತಿ ವೇಗವಾಗಿ ಸಾಲ್ವ್ ಮಾಡೋ ಮೂಲಕ ತ್ರಿವಳಿ ದಾಖಲೆ ಸೃಷ್ಟಿಸಿದ್ದಾರೆ. ಸಿನಿಮಾ ಬ್ಯಾಗ್ರೌಂಡ್ ಇದ್ರೂ ಮೊಮ್ಮಗನಿಗೆ ರೂಬಿಕ್ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ಇದಕ್ಕೆ ರಾಕ್‌ಲೈನ್ ಹಾಗೂ ಕುಟುಂಬಸ್ಥರು ಏನು ಹೇಳಿದ್ರು ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ..
- ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌ಲೈನ್ ಮೊಮ್ಮಗ ವರ್ಲ್ಡ್ ರೆಕಾರ್ಡ್
- ಮೆಗಾಮಿಂಕ್ಸ್ ಕ್ಯೂಬ್‌ನಲ್ಲಿ ತ್ರಿವಳಿ ರೆಕಾರ್ಡ್ ಬರೆದ ಶಿವತೇಜ..!!
- 1 ಗಂಟೆ 26 ನಿಮಿಷ ಟೈಂ.. ರೂಬಿಕ್ಸ್ ನಲ್ಲಿ ಶಿವತೇಜ ದಾಖಲೆ
- ಇಂಡಿಯಾ, ಏಷ್ಯಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನಿರತ್ನ ಮೊಮ್ಮಗ
ಸಿನಿಮಾ ಗ್ಲಾಮರ್ ಲೋಕದಿಂದಲೇ ಬಂದ ಕುಟುಂಬದ ಕುಡಿ ಸಾಧನೆ ಮಾಡಿದ್ದು ಸಿನಿಮಾ ಸೆಟ್‌ನಲ್ಲಿ ಅಲ್ಲ, ಬುದ್ಧಿಶಕ್ತಿಯ ಆಟದಲ್ಲಿ. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮೊಮ್ಮಗ ಶಿವತೇಜ ಈಗ ರೂಬಿಕ್ಸ್ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಸಂಕೀರ್ಣವಾದ ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್ ಅನ್ನು ಕೇವಲ 1 ಗಂಟೆ 26 ನಿಮಿಷದಲ್ಲಿ 255 ಸಲ solve ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ , ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ಹೆಸರು ದಾಖಲಿಸಿ ತ್ರಿವಳಿ ದಾಖಲೆ ಮಾಡಿರುವುದು ಈಗ ಸ್ಯಾಂಡಲ್‌ವುಡ್ ವಲಯದಲ್ಲೂ ದೊಡ್ಡ ಚರ್ಚೆಯಾಗಿದೆ.
ಈ ಹೆಮ್ಮೆಯ ಕ್ಷಣವನ್ನು ದಾಖಲಿಸಲು ಬೆಂಗಳೂರಿನ ದಿ Conrad ಬೆಂಗಳೂರು ಹೋಟೆಲ್‌ನಲ್ಲಿ ವಿಶೇಷ ಸುದ್ದಿಗೋಷ್ಠಿ ಕೂಡ ಆಯೋಜಿಸಲಾಯಿತು. ಈ ವೇಳೆ ರಾಕ್ ಲೈನ್ ವೆಂಕಟೇಶ್, ಪುತ್ರ ಯತೀಶ್ ವೆಂಕಟೇಶ್, ತಾಯಿ ಸಿಂಧೂರಿ, ಸಾಧಕ ಶಿವತೇಜ ಹಾಗೂ ರೂಬಿಕ್ಸ್ ಗುರು ಅಶ್ವಿನ್ ಎಸ್ ನಿಬಾಲ್ಕರ್ ಉಪಸ್ಥಿತರಿದ್ದರು. ಮೂರು ವರ್ಷದ ವಯಸ್ಸಿನಿಂದಲೇ ರೂಬಿಕ್ಸ್ ಅಭ್ಯಾಸ ಆರಂಭಿಸಿದ ಶಿವತೇಜ, ಅಶ್ವಿನ್ ಅವರ ಮಾರ್ಗದರ್ಶನದಲ್ಲಿ ನಿಬಾಲ್ಕರ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಈ ಮಟ್ಟಕ್ಕೆ ಬಂದಿದ್ದಾನೆ. ಗುರು ಅಶ್ವಿನ್ ಮಾತನಾಡಿ “12 ಸೈಡ್ ಮೆಗಾಮಿಂಕ್ಸ್ ಕ್ಯೂಬ್ ಅನ್ನು 1 ಗಂಟೆ 26 ನಿಮಿಷದಲ್ಲಿ 255 ಸಲ solve ಮಾಡಿರುವ ದಾಖಲೆ ಇದುವರೆಗೂ ಯಾರೂ ಮಾಡಿಲ್ಲ” ಎಂದು ತಿಳಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ರಾಕ್ ಲೈನ್ ವೆಂಕಟೇಶ್ ಕುಟುಂಬದಿಂದ ಈಗ ಬುದ್ಧಿಶಕ್ತಿಯ ಆಟದಲ್ಲೂ ಹೊಸ ರೆಕಾರ್ಡ್ ಹುಟ್ಟಿಕೊಂಡಿದೆ. ಸಿನಿಮಾ ಬ್ಯಾಕ್‌ಗ್ರೌಂಡ್ ಇದ್ದರೂ ಮೊಮ್ಮಗ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ತಾಯಿ ಸಿಂಧೂರಿ ಹೇಳುವಂತೆ, “ಚಿಕ್ಕಂದಿನಿಂದಲೇ ನನಗೆ ರೂಬಿಕ್ಸ್ ಮೇಲೆ ಆಸಕ್ತಿ ಇತ್ತು… ಅದನ್ನ ಮಗ ಮುಂದುವರೆಸಿ ಈ ಮಟ್ಟದ ಸಾಧನೆ ಮಾಡಿದ್ದಾನೆ” ಎಂದು ಸಂತೋಷ ವ್ಯಕ್ತಪಡಿಸಿದರು. ಇನ್ನು ಯತೀಶ್ ಕೂಡ ಮಗನ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದು ಈ ಸಾಧನೆ ಹಿಂದೆ ಕುಟುಂಬದ ಬೆಂಬಲ ಮತ್ತು ನಿರಂತರ ಅಭ್ಯಾಸವೇ ದೊಡ್ಡ ಶಕ್ತಿ ಎಂದು ಶಿವತೇಜ ಹೇಳಿದ್ದಾರೆ.
ಸಾಮಾನ್ಯವಾಗಿ ರೂಬಿಕ್ಸ್ ಕ್ಯೂಬ್ ಅಂದ್ರೆ 6 ಸೈಡ್ ಪಜಲ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಶಿವತೇಜ ಸಾಧನೆ ಮಾಡಿರುವುದು 12 ಸೈಡ್ ಇರುವ ಮೆಗಾಮಿಂಕ್ಸ್ ಕ್ಯೂಬ್‌ನಲ್ಲಿ. ಈ ಬುದ್ಧಿಶಕ್ತಿಯ ಆಟವನ್ನು ಜಗತ್ತಿಗೆ ಪರಿಚಯಿಸಿದವರು ಹಂಗೇರಿಯ ಪ್ರೊಫೆಸರ್ Erno Rubik. ಇಂದಿನ ದಿನದಲ್ಲಿ ಅಮೆರಿಕಾ, ಜಪಾನ್, ಚೀನಾ ಮೊದಲಾದ ದೇಶಗಳ ಯುವಕರು ಸ್ಪೀಡ್ ಕ್ಯೂಬಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತಹ ಕಠಿಣ ಪಜಲ್‌ನಲ್ಲಿ ಕರ್ನಾಟಕದ ಹುಡುಗ ಶಿವತೇಜ ಈ ಮಟ್ಟದ ಸಾಧನೆ ಮಾಡಿರುವುದು ದೇಶದ ಯುವ ಪ್ರತಿಭೆಗಳಿಗೆ ದೊಡ್ಡ ಪ್ರೇರಣೆ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದರೂ, ಬುದ್ಧಿಶಕ್ತಿಯ ಆಟದಲ್ಲಿ ವಿಶ್ವ ಮಟ್ಟದ ಗುರುತು ಮೂಡಿಸಿರುವ ಶಿವತೇಜನ ಈ ಸಾಧನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ‘ಆಸಕ್ತಿ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಶಿಖರ ತಲುಪಬಹುದು’ ಅನ್ನೋ ಸಂದೇಶ ನೀಡುತ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್