ನಮ್ಮ ಮೆಟ್ರೋ ಮೇಲೆ ‘ರಾಕಿ ಭಾಯ್’ ಅಬ್ಬರ: ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಗಿಫ್ಟ್

Untitled design 2026 01 06T184100.661

ಕನ್ನಡ ಚಿತ್ರರಂಗದ ಹೆಮ್ಮೆ, ಪ್ಯಾನ್ ಇಂಡಿಯಾ ಸ್ಟಾರ್ ‘ರಾಕಿಂಗ್ ಸ್ಟಾರ್’ ಯಶ್ ಅವರಿಗೆ ಜನವರಿ 8 ರಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಯಶ್ 40ನೇ ವರ್ಷಕ್ಕೆ ಕಾಲಿಡುತ್ತಿದ್ದು ಅವರ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ. ಪ್ರತಿ ವರ್ಷಕ್ಕಿಂತ ಈ ಸಲದ ಹುಟ್ಟುಹಬ್ಬ ವಿಶೇಷವಾಗಿರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದುದು ಬೆಂಗಳೂರಿನ ‘ನಮ್ಮ ಮೆಟ್ರೋ’ ಮೇಲೆ ರಾರಾಜಿಸುತ್ತಿರುವ ಯಶ್ ಅವರ ಪೋಸ್ಟರ್‌ಗಳು.

ಮೆಟ್ರೋ ಇತಿಹಾಸದಲ್ಲೇ ಮೊದಲು: ರಾಕಿ ಭಾಯ್ ಅಬ್ಬರ

ಯಶ್ ಅವರ ಆಪ್ತ ಗೆಳೆಯರು ಮತ್ತು ಅಭಿಮಾನಿಗಳು ಈ ಬಾರಿ ರಾಕಿ ಭಾಯ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದ ರೈಲುಗಳ ಮೇಲೆ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಬೃಹತ್ ಜಾಹೀರಾತುಗಳನ್ನು ನೀಡಲಾಗಿದೆ. ಮೆಟ್ರೋ ಸಂಚರಿಸುವ ದಾರಿಯುದ್ದಕ್ಕೂ ಯಶ್ ಅವರ ಪೋಸ್ಟರ್‌ಗಳು ಕಣ್ಮನ ಸೆಳೆಯುತ್ತಿವೆ. ಕೇವಲ ಮೆಟ್ರೋ ಮಾತ್ರವಲ್ಲದೆ, ಬೆಂಗಳೂರಿನ ಪ್ರಮುಖ ಹೆದ್ದಾರಿಗಳಲ್ಲಿ ಹಾಗೂ ನಗರದಾದ್ಯಂತ ದೊಡ್ಡ ದೊಡ್ಡ ಕಟೌಟ್‌ಗಳು ಮತ್ತು ಡಿಜಿಟಲ್ ಬೋರ್ಡ್‌ಗಳ ಮೂಲಕ ‘ಅಣ್ತಮ್ಮ’ನ ಬರ್ತ್‌ಡೇ ಮೆರುಗನ್ನು ಹೆಚ್ಚಿಸಲಾಗಿದೆ.

‘ಟಾಕ್ಸಿಕ್’ ಸಿನಿಮಾದಿಂದ ಸಿಗಲಿದೆಯೇ ಬಿಗ್ ಗಿಫ್ಟ್ ?

ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವುದು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಅಪ್‌ಡೇಟ್‌ಗಾಗಿ. ಈಗಾಗಲೇ ಚಿತ್ರತಂಡವು ಸಿನಿಮಾದಲ್ಲಿ ನಟಿಸುತ್ತಿರುವ ಪ್ರಮುಖ ನಟಿಯರ ಫಸ್ಟ್ ಲುಕ್ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದೆ.

ನಟಿಯರ ಪರಿಚಯವಾದ ಮೇಲೆ ಈಗ ಎಲ್ಲರ ಕಣ್ಣು ಯಶ್ ಅವರ ಪಾತ್ರದ ಮೇಲೆ ತೀವ್ರ ಕುತೂಹಲವೆ. ಜನವರಿ 8ರಂದು ಚಿತ್ರದ ಫಸ್ಟ್ ಲುಕ್ ಟೀಸರ್ ಅಥವಾ ಯಶ್ ಅವರ ಪಾತ್ರದ ಝಲಕ್ ಬಿಡುಗಡೆಯಾಗಬಹುದು ಎಂದು ಫ್ಯಾನ್ಸ್‌ ನಿರೀಕ್ಷಿಸಲಾಗಿಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳು ಹಾಗೂ ಸಿನಿರಸಿಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಚಿತ್ರತಂಡದ ಮೇಲೆ ಕಣ್ಣು

ಯಶ್ ಕೇವಲ ‘ಟಾಕ್ಸಿಕ್’ ಮಾತ್ರವಲ್ಲದೆ, ಬಾಲಿವುಡ್‌ನ ಪ್ರತಿಷ್ಠಿತ ‘ರಾಮಾಯಣ’ ಸಿನಿಮಾದಲ್ಲೂ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಯಶ್ ಸಹ-ನಿರ್ಮಾಪಕರು ಕೂಡ ಹೌದು. ಈ ಹಿನ್ನೆಲೆಯಲ್ಲಿ ರಾಮಾಯಣ ಚಿತ್ರತಂಡದಿಂದ ಏನಾದರೂ ವಿಶೇಷ ಪೋಸ್ಟರ್ ಬರಲಿದೆಯೇ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಸದ್ಯಕ್ಕೆ ಯಾವುದೇ ಪ್ಲಾನ್ ಇಲ್ಲ ಎನ್ನಲಾಗಿದ್ದರೂ, ಅಭಿಮಾನಿಗಳ ಪ್ರೀತಿಗಾಗಿ ಕೊನೆಯ ಕ್ಷಣದಲ್ಲಿ ಸರ್ಪ್ರೈಸ್ ಸಿಕ್ಕರೂ ಅಚ್ಚರಿಯಿಲ್ಲ. ಒಟ್ಟಾರೆಯಾಗಿ, 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯಶ್ ಅವರಿಗೆ ಈ ವರ್ಷ ವೃತ್ತಿಜೀವನದ ಅತಿ ದೊಡ್ಡ ವರ್ಷವಾಗಲಿದೆ. ರಾಕಿಂಗ್ ಸ್ಟಾರ್‌ಗೆ ಜನ್ಮದಿನದ ಶುಭಾಶಯಗಳು.

Exit mobile version