ಮಲಯಾಳಂ ಸಿನಿಮಾ ‘ಮಾಲಿವುಡ್ ಟೈಮ್ಸ್’ ಇದೀಗ ವಿವಾದಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿ (CBFC) ಸೂಚಿಸಿದ ಕಟ್‌ಗಳನ್ನು ಉಲ್ಲಂಘಿಸಿ, ಚಿತ್ರಮಂದಿರಗಳಲ್ಲಿ ಅನುಮೋದನೆ ಪಡೆಯದ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ ಎಂಬ ಆರೋಪದ ಮೇಲೆ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಪ್ರಾದೇಶಿಕ ಕಚೇರಿ ನೀಡಿದ ದೂರಿನ ಆಧಾರದ ಮೇಲೆ ತಿರುವಲ್ಲಂ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಚಿತ್ರದ ನಿರ್ಮಾಪಕರು, ನಿರ್ದೇಶಕರು, ವಿತರಕರು ಹಾಗೂ ಸಂಬಂಧಪಟ್ಟ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
- ‘ಮಾಲಿವುಡ್ ಟೈಮ್ಸ್’ ಸಿನಿಮಾದಲ್ಲಿ ಸೆನ್ಸಾರ್ ಕಟ್ ಮಾಡಿದ ದೃಶ್ಯ ಮರುಪ್ರದರ್ಶನ ಆರೋಪ
- CBFC ದೂರಿನ ಆಧಾರದಲ್ಲಿ ಕೇರಳ ಪೊಲೀಸರು FIR ದಾಖಲು
- ನಿರ್ಮಾಪಕ, ನಿರ್ದೇಶಕ, ವಿತರಕರು ಸೇರಿ ಹಲವರ ವಿರುದ್ಧ ಪ್ರಕರಣ
- ಸಿನಿಮಾಟೋಗ್ರಾಫ್ ಕಾಯ್ದೆಯಡಿ ಕಾನೂನು ಕ್ರಮ
- ತಪ್ಪು ಸಾಬೀತಾದರೆ ಜೈಲು ಶಿಕ್ಷೆ ಮತ್ತು ದಂಡದ ಅವಕಾಶ
ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಆರಂಭದಲ್ಲಿ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಹಾಗೂ ಆಕ್ಷೇಪಾರ್ಹ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ CBFC ಸೂಚಿಸಿತ್ತು. ಈ ಬದಲಾವಣೆಗಳ ನಂತರವೇ ಸಿನಿಮಾಗೆ ‘ಯು/ಎ 16+’ ಪ್ರಮಾಣಪತ್ರ ನೀಡಲಾಗಿತ್ತು.
ಆದರೆ, ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಆವೃತ್ತಿಯಲ್ಲಿ ಸೆನ್ಸಾರ್ ಮಂಡಳಿ ಅನುಮೋದಿಸದ ದೃಶ್ಯಗಳು ಮತ್ತೆ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಮ್ಯೂಟ್ ಮಾಡಲಾಗಿದ್ದ ಸಂಭಾಷಣೆಗಳನ್ನೂ ಮರುಸೇರ್ಪಡೆ ಮಾಡಿ ಪ್ರದರ್ಶಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರಮಂದಿರಗಳಿಗೆ ಅಧಿಕೃತವಾಗಿ ಅನುಮೋದಿತ ಆವೃತ್ತಿಯ ಬದಲಿಗೆ ಬೇರೆ ಅನ್-ಸೆನ್ಸಾರ್ಡ್ ಆವೃತ್ತಿಯನ್ನು ವಿತರಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 7(1)(a)(ii) ಅಡಿಯಲ್ಲಿ ದಾಖಲಿಸಲಾಗಿದೆ.
ಭಾರತದಲ್ಲಿ ಸೆನ್ಸಾರ್ ಪ್ರಮಾಣೀಕರಣದ ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಅಪರಾಧವಾಗಿದೆ. ಯಾವುದೇ ಸಿನಿಮಾ ಆದರೂ ಅದು ಸೆನ್ಸಾರ್ ಮಂಡಲಿಯ ನಿಯಮವನ್ನು ಮೀರುವಂತಿಲ್ಲ. ಕಾನೂನು ಪ್ರಕಾರ, ಪ್ರಮಾಣೀಕರಣ ಪಡೆದ ನಂತರ ಅನುಮತಿಯಿಲ್ಲದೆ ಸಿನಿಮಾದಲ್ಲಿ ಬದಲಾವಣೆ ಮಾಡುವುದು ಅಥವಾ ಸೆನ್ಸಾರ್ ಆಗದ ಆವೃತ್ತಿಯನ್ನು ಪ್ರದರ್ಶಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಚಿತ್ರದ ಪ್ರಿಂಟ್‌ಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನ್ಯಾಯಾಲಯಕ್ಕಿದೆ.
ಈ ಪ್ರಕರಣದಲ್ಲಿ ಪೊಲೀಸರು ಶೀಘ್ರದಲ್ಲೇ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. FIR ನಲ್ಲಿ ಚಿತ್ರದ ನಿರ್ದೇಶಕ ಅಭಿನವ್ ಸುಂದರ್ ನಾಯಕ್, ನಿರ್ಮಾಪಕರು, ವಿತರಕರು, ಡಿಜಿಟಲ್ ಸರ್ವೀಸ್ ಪ್ರೊವೈಡರ್ ಹಾಗೂ ಕೆಲವು ಚಿತ್ರಮಂದಿರಗಳ ನಿರ್ವಹಣೆಯವರ ಹೆಸರು ಸೇರಿಸಲಾಗಿದೆ.
‘ಮಾಲಿವುಡ್ ಟೈಮ್ಸ್’ ಚಿತ್ರವು ಚಿತ್ರರಂಗದ ಒಳಗಿನ ಕೆಲವು ಅಂಶಗಳನ್ನು ಅನಾವರಣಗೊಳಿಸುವ ಕಥೆಯನ್ನು ಹೊಂದಿದೆ. ಇದೀಗ ಸಿನಿಮಾ ಕಥೆಗಿಂತಲೂ ಅದರ ಪ್ರದರ್ಶನದ ಕುರಿತಾದ ವಿವಾದವೇ ಹೆಚ್ಚು ಚರ್ಚೆಗೆ ಕಾರಣವಾಗಿದೆ.
