ರಿಷಬ್ ಶೆಟ್ಟಿ ಬರೀ ಹೀರೋ ಅಥ್ವಾ ಡೈರೆಕ್ಟರ್ ಮಾತ್ರ ಅಲ್ಲ. ನಮ್ಮ ಸಂಸ್ಕೃತಿಯ ರಾಯಭಾರಿಯೂ ಹೌದು. ಕಾಂತಾರ-1 ಸಕ್ಸಸ್ ಬಳಿಕ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಮುಖ್ಯ ಅತಿಥಿಯಾಗಿ ತೆರಳಿದ್ದ ಡಿವೈನ್ ಸ್ಟಾರ್, ಅಲ್ಲಿ ಯಕ್ಷಗಾನದ ಮಹತ್ವವನ್ನು ದೇಶಕ್ಕೆ ಸಾರಿದ್ದಾರೆ. ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವಂತಹ ಆ ಅವಿಸ್ಮರಣೀಯ ಕ್ಷಣಗಳ ಬಗ್ಗೆ ಹೇಳ್ತೀವಿ ಈ ಸ್ಟೋರಿ ನೋಡಿ.
ರಿಷಬ್ ಶೆಟ್ಟಿ.. ನಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟವರಲ್ಲಿ ಒಬ್ಬರು. ಸಿನಿಮಾ ಅನ್ನೋದು ಫ್ಯಾಂಟಸಿ, ಎಂಟರ್‌ಟೈನ್ಮೆಂಟ್‌ಗಿಂತ ವಾಸ್ತವತೆಗೆ ಹತ್ತಿರವಾದ ಅಂಶಗಳಿಂದ ಕೂಡಿದ್ರೆ ಅದು ಎಷ್ಟು ಮಂದಿ ಮನಸುಗಳನ್ನ ಮುಟ್ಟಬಲ್ಲದು ಅನ್ನೋದನ್ನ ತೋರಿಸಿಕೊಟ್ಟವರು. ಕಾಂತಾರ, ಕಾಂತಾರ-1 ಚಿತ್ರಗಳಿಂದ ಕಮರ್ಷಿಯಲ್ ಡೈರೆಕ್ಟರ್ ಹಾಗೂ ಆ್ಯಕ್ಟರ್ ಅನಿಸಿಕೊಳ್ಳದೆ, ನಮ್ಮ ಮಣ್ಣಿನ ಆಚಾರ, ವಿಚಾರ, ಸಾಂಸ್ಕೃತಿಕ ಪರಂಪರೆಯನ್ನ ವಿಶ್ವಕ್ಕೆ ಸಾರುವ ಕಾರ್ಯ ಮಾಡಿದ್ರು. ಅದ್ರಲ್ಲೂ ದೈವ, ಕೋಲ, ಪಂಜುರ್ಲಿಯ ಮಹತ್ವ ತಿಳಿಸಿದ್ರು.
ದೇಶಕ್ಕೆ ಯಕ್ಷಗಾನ ಮಹತ್ವ ಸಾರಿದ ಹೆಮ್ಮೆಯ ಕನ್ನಡಿಗ..!
ಅಂದು ಕಿಚ್ಚ.. ಇಂದು ಶೆಟ್ರು.. ಗೋವಾ ಫಿಲ್ಮ್ ಫೆಸ್ಟ್ ರಂಗು
ರಿಷಬ್ ಶೆಟ್ಟಿಗೀಗ ವಿಶ್ವದ ಯಾವುದೇ ಮೂಲೆಗೆ ಹೋದರೂ ಸಹ ವಿಶೇಷವಾದ ಅಭಿಮಾನಿ ಬಳಗವಿದೆ. ಅದೇ ಕಾರಣದಿಂದ ಇತ್ತೀಚೆಗೆ ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ತೆರಳಿದ್ದರು. ಗೋವಾ ಸಿಎಂ ಪ್ರಮೋದ್ ಸಾವಂತ್, ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್‌ನ ಸೆನ್ಸೇಷನಲ್ ನಟ ರಣ್‌ವೀರ್ ಸಿಂಗ್ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡ್ರು ನಮ್ಮ ರಿಷಬ್ ಶೆಟ್ಟಿ.
ಬರೀ ಸಿನಿಮಾಗಳ ಮೂಲಕ ಅಷ್ಟೇ ಅಲ್ಲ, ತಾವು ಹೋಗುವ ವೇದಿಕೆಗಳ ಮೂಲಕವೂ ಸಹ ನಮ್ಮ ನಾಡು, ನುಡಿಯ ಸಂಸ್ಕೃತಿ, ಉಡುಗೆ, ತೊಡುಗೆ, ಆಚಾರ, ಸಂಪ್ರದಾಯಗಳನ್ನ ಸಾರುವ ಕಾರ್ಯ ಮಾಡ್ತಾರೆ ರಿಷಬ್ ಶೆಟ್ಟಿ. ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಗೋಲ್ಡ್ ಪಂಚೆ ಹಾಗೂ ಬ್ಲ್ಯಾಕ್ ಶರ್ಟ್ ಧರಿಸಿ ತೆರಳಿದ್ದ ಡಿವೈನ್ ಸ್ಟಾರ್, ಆ ವೇದಿಕೆಯಲ್ಲಿ ಕೂಡ ಯಕ್ಷಗಾನದ ಮಹತ್ವವನ್ನು ಇಡೀ ದೇಶಕ್ಕೆ ಸಾರುವ ಕಾರ್ಯ ಮಾಡಿದ್ರು. ವಿಶೇಷವಾಗಿ ಮಂಗಳೂರಿನಿಂದ ತೆರಳಿದ್ದ ವಿದ್ಯಾ ಕೋಳ್ಯೂರು ನೇತೃತ್ವದ ಯಕ್ಷಗಾನ ಕಲಾವಿದರ ತಂಡದ ಕಿರು ಪ್ರದರ್ಶನದ ಬಳಿಕ ರಿಷಬ್ ಆ ಯಕ್ಷಗಾನದ ಮುಕುಟ ಧರಿಸಿ, ತಮ್ಮ ಯಕ್ಷಗಾನದ ದಿನಗಳನ್ನ ನೆನೆದರು.
6ನೇ ಕ್ಲಾಸ್‌ನಲ್ಲೇ ಬಣ್ಣ.. ಬಾಲ್ಯದ ದಿನಗಳನ್ನ ನೆನೆದ ಶೆಟ್ರು
ರಜನಿ, ಗೋವಾ ಸಿಎಂ, ರಣ್ವೀರ್ ಸಿಂಗ್ ಜೊತೆ ರಿಷಬ್..!
ಬಾಲ್ಯದಲ್ಲೇ ಬಣ್ಣ ಹಚ್ಚಿದ್ದ ರಿಷಬ್ ಶೆಟ್ಟಿ 6ನೇ ಕ್ಲಾಸ್‌ನಲ್ಲಿ ಇರುವಾಗ್ಲೇ ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿದ್ದ ಆ ದಿನಗಳನ್ನ ನೆನೆದರು. ಸುಮಾರು 500 ವರ್ಷಗಳ ಇತಿಹಾಸವಿರೋ ಕರ್ನಾಟಕದ ಶ್ರೇಷ್ಠ ಕಲೆಗಳಲ್ಲಿ ಒಂದಾಗಿರೋ ಯಕ್ಷಗಾನ, ಕರಾವಳಿ ಭಾಗದಲ್ಲಿ ರಾಮಾಯಣ ಮಹಾಭಾರತದ ಕಥೆಗಳ ಬಗ್ಗೆ ಅರಿವು ಮೂಡಿಸಲಿದೆ ಎಂದರು. ಕಲಾಕ್ಷೇತ್ರಕ್ಕೆ ಯಕ್ಷಗಾನ ಕಲಾವಿದರ ಕೊಡುಗೆ ದೊಡ್ಡದಿದೆ. ಸಿನಿಮಾಗೆ ಬಂದ ಬಳಿಕವೂ ಸಹ ನನ್ನ ಮೇಲೆ ಯಕ್ಷಗಾನ ಬಹಳ ಪ್ರಭಾವ ಬೀರಿದೆ. ನನ್ನ ಸಿನಿಮಾಗಳಿಗೆ ಕರಾವಳಿಯ ಸಂಸ್ಕೃತಿ ಹಾಗೂ ಯಕ್ಷಗಾನ ಪ್ರೇರಣೆಯಾಗಿದೆ ಎಂದಿದ್ದಾರೆ.
ನಿಜಕ್ಕೂ ಇದು ಒಬ್ಬ ಕಲಾವಿದನಿಗೆ ಇರಬೇಕಾದ ಮೂಲಭೂತ ಕರ್ತವ್ಯವೂ ಹೌದು. ನಾವು ಎಲ್ಲೇ ಹೋದರೂ ಸಹ ನಮ್ಮ ಚಿತ್ರರಂಗದ ಜೊತೆ ಭೌಗೋಳಿಕ ಪ್ರದೇಶವನ್ನು ಪ್ರತಿನಿಧಿಸುತ್ತೇವೆ. ಆದ್ರೆ ಅದು ಎಷ್ಟು ಸಮೃದ್ಧವಾಗಿದೆ ಅನ್ನೋದು ಇಂತಹ ಅಪರೂಪದ, ಅವಿಸ್ಮರಣೀಯ ಘಟನೆಗಳಿಂದ ಅನ್ನೋದು ವಿಶೇಷ. ಒನ್ಸ್ ಅಗೈನ್ ನಮ್ಮ ಕನ್ನಡಿಗರೆಲ್ಲಾ ಶೆಟ್ರ ಈ ಕಲಾಭಿಮಾನ, ಕಲಾ ಗೌರವ ಕಂಡು ಶಹಬ್ಬಾಸ್ ಅಂತಿದ್ದಾರೆ.
