ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?

ಒಂದಲ್ಲ ಎರಡೆರಡು ಚಿತ್ರಗಳಿಗೆ ಕಮಿಟ್ ಆದ್ರಾ ನಮ್ಮ ಶೆಟ್ರು..?

ಸರ್ಕಾರ (6)

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಲಯಾಳಂನ ಸೆನ್ಸೇಷನಲ್ ಡೈರೆಕ್ಟರ್ ಚಿದಂಬರಂ ಜೊತೆ ಕೈ ಜೋಡಿಸ್ತಾರೆ ಅನ್ನೋ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಯೆಸ್.. ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್‌‌‌‌‌ ಆ್ಯಕ್ಷನ್ ಕಟ್ ಹೇಳಲಿರೋ ಚಿತ್ರದಲ್ಲಿ ಬಣ್ಣ ಹಚ್ಚಿ, ಕ್ಯಾಮೆರಾ ಮುಂದೆ ನಿಲ್ತಾರಂತೆ ರಿಷಬ್. ಇಷ್ಟಕ್ಕೂ ಅದ್ಯಾವ ಸಿನಿಮಾ..? ಯಾವಾಗ ಶುರು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.

ಕಾಂತಾರಗೆ 4 ವರ್ಷ.. ಕಾಂತಾರ ಚಾಪ್ಟರ್-1ಗೆ ವರ್ಷದ ಹರುಷ. ಯೆಸ್.. ಇತ್ತೀಚೆಗೆ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಕೂಡ ಈ ಖುಷಿಯನ್ನ ಪೋಸ್ಟ್ ಮಾಡೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ರಿಷಬ್‌ ಶೆಟ್ಟಿಗೆ ಕಾಂತಾರ ನೇಮು, ಫೇಮು, ಹಣ, ಆಸ್ತಿ, ಅಂತಸ್ತು, ಗೌರವ ಎಲ್ಲವನ್ನ ತಂದುಕೊಡ್ತು. ಆದ್ರೆ ಕಾಂತಾರ ನಮ್ಮ ಕನ್ನಡ ಇಂಡಸ್ಟ್ರಿಗೆ ಮುತ್ತಿನಂತ ಮಹಾನ್ ಮೇಧಾವಿ ಡೈರೆಕ್ಟರ್‌‌ ಕಮ್ ನಟನನ್ನ ನೀಡಿದ್ದು ಕೂಡ ಅಷ್ಟೇ ಸತ್ಯ.

ಅಂದಹಾಗೆ ರಿಷಬ್ ಶೆಟ್ಟಿ ನಮ್ಮ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ದೇಶ, ವಿದೇಶಗಳಲ್ಲಿ ಸದ್ದು ಮಾಡಿ ಆಯ್ತು. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್. ಅವ್ರಲ್ಲಿರೋ ಕಲೆಗೆ ಬೆಲೆ ಕಟ್ಟುತ್ತಾ ಪರಭಾಷಾ ಬಿಗ್ ಪ್ರೊಡಕ್ಷನ್ ಹೌಸ್‌‌ಗಳೆಲ್ಲಾ ಮನೆ ಮುಂದೆ ಕ್ಯೂ ನಿಲ್ತಿವೆ. ಅದ್ರಲ್ಲೂ ತೆಲುಗಿನ ಪ್ರತಿಷ್ಠಿತ ಬ್ಯಾನರ್‌‌ವೊಂದಕ್ಕೆ ಜೈ ಹನುಮಾನ್ ಸಿನಿಮಾ ಮಾಡ್ತಿದ್ದಾರೆ. ಅದಾದ ಬಳಿಕ ಬಾಲಿವುಡ್‌ನ ಮೆಗಾ ಪ್ರಾಜೆಕ್ಟ್ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಸರತಿ ಸಾಲಿನಲ್ಲಿದೆ. ಅದಕ್ಕಾಗಿ ಹಗಲಿರುಳು ರಿಷಬ್ ಬ್ಯುಸಿ ಆಗಿದ್ದಾರೆ.

ಇವೆಲ್ಲದರ ನಡುವೆ ಇದೀಗ ಹೊಚ್ಚ ಹೊಸ ಸುದ್ದಿಯೊಂದು ದಟ್ಟವಾಗಿ ಹರಿದಾಡ್ತಿದೆ. ಅದೇನಪ್ಪಾ ಅಂದ್ರೆ ನಮ್ಮ ರಿಷಬ್ ಶೆಟ್ರು ಮಲಯಾಳಂನ ಸೆನ್ಸೇಷನಲ್ ಡೈರೆಕ್ಟರ್ ಚಿದಂಬರಂ ಜೊತೆ ಕೈ ಜೋಡಿಸಲಿದ್ದಾರಂತೆ. ಯೆಸ್.. ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ನಿರ್ದೇಶನಕ್ಕೆ ದೇಶದ ಗಮನ ಸೆಳೆದ ಚಿದಂಬರಂ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಪಡೆದಿದ್ರು. ಅದಾದ ಬಳಿಕ ಬಂದಂತಹ ಅವ್ರ ನಿರ್ದೇಶನದ ಬಾಲನ್ ಕೂಡ ವಿಮರ್ಶಕರಿಂದ ಅದ್ಭುತ ರೆಸ್ಪಾನ್ಸ್ ಪಡೆದಿದ್ದು ಸುಳ್ಳಲ್ಲ.

ಇದೀಗ ಅದೇ ನಿರ್ದೇಶಕರ ಜೊತೆ ಶೆಟ್ರು ಕೆಲಸ ಮಾಡಲಿದ್ದಾರೆ ಎನ್ನಲಾಗ್ತಿದೆ. ಒಂದಲ್ಲ ಎರಡೆರಡು ಪ್ರಾಜೆಕ್ಟ್‌‌ಗಳಿಗೆ ಕಮಿಟ್ ಆಗಿದ್ದಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಆ ಪೈಕಿ ಒಂದು ಪ್ರಾಜೆಕ್ಟ್ ಸ್ಪೋರ್ಟ್ಸ್ ಡ್ರಾಮಾ ಆಗಿರಲಿದ್ದು, ಸ್ಪೋರ್ಟ್ಸ್‌ ಬೇಸ್ಡ್ ಸಿನಿಮಾಗೆ ಮುಂದಿನ ವರ್ಷ ಚಾಲನೆ ನೀಡಲಿದ್ದಾರಂತೆ. ಅದನ್ನ ಶಿಬು ಥಮೀನ್ಸ್ ಪ್ರೊಡ್ಯೂಸ್ ಮಾಡೋ ಮುಖೇನ ಬಂಡವಾಳ ಹೂಡಲಿದ್ದಾರಂತೆ.

ಇದು ನಿಜವಾದ್ರೆ ಇಬ್ಬರು ದೈತ್ಯ ಪ್ರತಿಭೆಗಳ ಕಾಂಬೋನಿಂದ ದಿ ಬೆಸ್ಟ್ ಸಿನಿಮಾವೊಂದು ಹೊರಬರೋದು ಪಕ್ಕಾ. ಯಾಕಂದ್ರೆ ರಿಷಬ್ ಸಿನಿಮಾದ 24 ಕ್ರಾಫ್ಟ್ಸ್‌‌ನಲ್ಲಿ ಕೆಲಸ ಮಾಡಿದ ಅನುಭವ ಇರೋ ಫಿಲ್ಮ್ ಮೇಕರ್. ಅತ್ತ ಚಿದಂಬರಂ ಕೂಡ ಯಂಗೆಸ್ಟ್ ಡೈರೆಕ್ಟರ್ ಜೊತೆ ಅದ್ಭುತ ಕಲಾವಿದನೂ ಹೌದು. ಆನ್ & ಆಫ್ ಸ್ಕ್ರೀನ್‌‌ನಲ್ಲಿ ಪಳಗಿರೋ ಚಿದಂಬರಂ ನಮ್ಮ ಡಿವೈನ್ ಸ್ಟಾರ್ ಜೊತೆ ಸಿನಿಮಾ ಮಾಡೋದು ನಿಜಕ್ಕೂ ಗ್ರೇಟ್ ನ್ಯೂಸ್. ಆದ್ರೆ ಇದು ಇನ್ನೂ ಅಧಿಕೃತ ಆಗಿಲ್ಲ. ಅವರೇ ಅನೌನ್ಸ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version