ಲೆಜೆಂಡರಿ ಡೈರೆಕ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ. ಯೆಸ್.. ಭಾರತೀಯ ಚಿತ್ರರಂಗದಲ್ಲಿ ಎಕ್ಸ್‌ಪೆರಿಮೆಂಟ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಮಾಸ್ಟರ್‌ಮೈಂಡ್, ಇಹಲೋಕ ತ್ಯಜಿಸೋ ಮೂಲಕ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಕರುನಾಡ ಚಕ್ರವರ್ತಿ ಶಿವಣ್ಣನನ್ನ ಹೀರೋ ಆಗಿ ಇಂಟ್ರಡ್ಯೂಸ್ ಮಾಡಿದ ದಿಗ್ಧರ್ಶಕ ಸಿಂಗೀತಂ ಸಿನಿ ಸಾಮ್ರಾಜ್ಯವನ್ನ ಒಮ್ಮೆ ಮೆಲುಕು ಹಾಕೋಣ ಬನ್ನಿ.
- ಎಕ್ಸ್‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಇನ್ನು ನೆನಪು ಮಾತ್ರ
- 6 ಭಾಷೆ.. 60+ ಸಿನಿಮಾ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್
- ಶಿವಣ್ಣನ ಲಾಂಚ್ ಮಾಡಿದ ಸೂಪರ್ ಸ್ಟಾರ್‌ಗಳ ಡೈರೆಕ್ಟರ್
- ಮೊದಲ ಮೂಕಿ ಮತ್ತು ಟೈಮ್ ಟ್ರಾವೆಲ್ ಚಿತ್ರಗಳ ಸರದಾರ
ಸಿಂಗೀತಂ ಶ್ರೀನಿವಾಸ್ ರಾವ್.. ಭಾರತೀಯ ಚಿತ್ರರಂಗ ಕಂಡ ಮಹಾನ್ ದಿಗ್ದರ್ಶಕ. ಹುಟ್ಟಿದ್ದು ಆಂಧ್ರದಲ್ಲಿ ಆದ್ರೂ ಸೆಟಲ್ ಆಗಿದ್ದು ಚೆನ್ನೈನಲ್ಲಿ. ಆದ್ರೆ ಭಾರತೀಯ ಚಿತ್ರರಂಗದ ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಬಹುದೊಡ್ಡ ಛಾಪು ಮೂಡಿಸಿದ್ದಾರೆ ಸಿಂಗೀತಂ. ಅಲ್ಲದೆ ಇಂಗ್ಲಿಷ್ ಮೂವಿಗಳನ್ನ ಮಾಡೋ ಮೂಲಕ ಹಾಲಿವುಡ್‌ಗೂ ಕೊಡುಗೆ ನೀಡಿದ ಗರಿಮೆ ಇವರದ್ದು.
6 ಭಾಷೆಗಳಲ್ಲಿ 60ಕ್ಕೂ ಅಧಿಕ ಸಿನಿಮಾಗಳನ್ನ ನಿರ್ದೇಶಿಸಿರೋ ಇವರು, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಬರಹಗಾರರು, ನಿರ್ಮಾಪಕರು, ನಟ ಹಾಗೂ ಸಂಗೀತ ಸಂಯೋಜಕರೂ ಹೌದು. ಅದರಲ್ಲೂ ಎಕ್ಸ್‌ಪೆರಿಮೆಂಟ್ಸ್ ಮಾಡೋದ್ರಲ್ಲಿ ಮಾಸ್ಟರ್ ಈ ಸಿಂಗೀತಂ ಶ್ರೀನಿವಾಸ್ ರಾವ್. 1972ರಿಂದ 2026ರ ತನಕ ಇಡೀ ಜೀವಮಾನವನ್ನ ಕಲೆಗಾಗಿ ಮುಡಿಪಾಗಿಟ್ಟ ಸಿನಿಸಂತ ಅಂದ್ರೆ ತಪ್ಪಾಗಲ್ಲ.
95ನೇ ಇಳಿವಯಸ್ಸಿನಲ್ಲಿ ಕೂಡ ವ್ಹೀಲ್ ಚೇರ್ ಮೇಲೆಯೇ ಕೂತು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಲೆಜೆಂಡ್ ಡೈರೆಕ್ಟರ್. ಹೌದು.. ಇದೇ ವರ್ಷ ತೆರೆಕಂಡ ಸಿಂಗ್ ಗೀತಂ ಅನ್ನೋ ಮ್ಯೂಸಿಕಲ್ ಮೂವಿ ಅವ್ರ ಕಟ್ಟಕಡೆಯ ಸಿನಿಮಾ ಆಗಿ ಹೊರಹೊಮ್ಮಿತ್ತು. ಆ ಸಿನಿಮಾಗೆ ಡೈಲಾಗ್ಸ್ ಇಲ್ಲದೇನೇ ಬರೀ ಹಾಡುಗಳಲ್ಲೇ ಸಂಭಾಷಣೆ ಕಟ್ಟಿಕೊಡೋ ಮೂಲಕ ನೂತನ ದಾಖಲೆ ಬರೆದಿದ್ದರು. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಆ ಸಿನಿಮಾನ ನಿರ್ಮಾಣ ಮಾಡಿದ್ರು. ಅವರ ಬಳಿ ಸ್ವತಃ ಸಿಂಗೀತಂ ಅವ್ರೇ ಹಂಚಿಕೊಂಡಂತೆ ಕೊನೆಯ ಹಾಗೂ ಹೊಚ್ಚ ಹೊಸ ಸಿನಿಮಾಗೆ ‘ಆ ಫ್ರೂಟ್ ಕಟ್ಸ್ ದಿ ನೈಫ್’ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದ್ದು ಸುಳ್ಳಲ್ಲ.
ಅಷ್ಟರಲ್ಲೇ ಸಿಂಗೀತಂ ಶ್ರೀನಿವಾಸ್ ರಾವ್ ವಯೋಸಹಜ ಕಾಯಿಲೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 3, ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಕಮಲ್ ಹಾಸನ್ ಅಂತಹ ಸೂಪರ್ ಸ್ಟಾರ್‌ಗಳು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ರೆ, ಸಾಕಷ್ಟು ಮಂದಿ ಚಿತ್ರರಂಗದ ಮಂದಿ ಸೋಶಿಯಲ್ ಮೀಡಿಯಾಗಳ ಮೂಲಕ ನಮನ ಸಲ್ಲಿಸಿದ್ದಾರೆ.
ನೀವೇ ಒಂದು ಕಲೆ.. ಮತ್ತೆ ಹುಟ್ಟಿ ಬನ್ನಿ ಎಂದ ಶಿವಣ್ಣ
ಸಿಂಗೀತಂ ಶ್ರೀನಿವಾಸ್ ರಾವ್ ಹಲವು ಮೊದಲುಗಳಿಗೆ ಮುನ್ನುಡಿ ಬರೆದವರು. ಕಮಲ್ ಹಾಸನ್ ಅವರ ಪುಷ್ಪಕ ವಿಮಾನ ಸಿನಿಮಾದಿಂದ ಭಾರತದ ಮೊದಲ ಮೂಕಿ ಸಿನಿಮಾ ನಿರ್ದೇಶಕ ಅನಿಸಿಕೊಂಡರು. ನಂದಮೂರಿ ಬಾಲಕೃಷ್ಣ ನಟನೆಯ ಆದಿತ್ಯ 369 ಸಿನಿಮಾದ ಮೂಲಕ ಮೊದಲ ಟೈಮ್ ಟ್ರಾವೆಲ್ ಸಿನಿಮಾ ಮಾಡಿದ ಕೀರ್ತಿಗೆ ಪಾತ್ರರಾದವರು. ಅಲ್ಲದೆ.. ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್‌ನ ಹೀರೋ ಆಗಿ ಆನಂದ್ ಸಿನಿಮಾದಿಂದ ಲಾಂಚ್ ಮಾಡಿದ್ದು ಕೂಡ ಇದೇ ಸಿಂಗೀತಂ.
ನಟ ಶಿವರಾಜ್‌ಕುಮಾರ್ ಕೂಡ ತಮ್ಮ 40 ವರ್ಷಗಳ ಸಿನಿಯಾನವನ್ನ ನೆನೆದು, ಅಂದು ಆನಂದ್ ಸಿನಿಮಾದಿಂದ ಶುರುವಾದ ಪಯಣ ಇಷ್ಟು ಸುದೀರ್ಘವಾಗಿ ಸಾಗಿರೋದು ನಿಮ್ಮಿಂದ. ಕಲೆಗಾಗಿ ನೀವು ಬದುಕಿದವರಲ್ಲ. ನೀವೇ ಒಂದು ಕಲೆ ಅಂತ ಬಣ್ಣಿಸೋ ಮೂಲಕ ಗುರುಗಳಿಗೆ ಮತ್ತೆ ಹುಟ್ಟಿ ಬನ್ನಿ ಅಂತ ಪೋಸ್ಟ್ ಹಾಕೋ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
- ಡಾ. ರಾಜ್ ಎವರ್‌ಗ್ರೀನ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್
- ಭೈರವ ದ್ವೀಪಂ, ವಿಚಿತ್ರ ಸೋದರುಲು ವಿಭಿನ್ನ ಪ್ರಯೋಗ
ನಟಸಾರ್ವಭೌಮ ಡಾ ರಾಜ್‌ಕುಮಾರ್‌ಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದ್ರು ಸಿಂಗೀತಂ. ಹಾಲು ಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮೀ ಬಾರಮ್ಮ, ದೇವತಾ ಮನುಷ್ಯ ಅಂತಹ ಎವರ್‌ಗ್ರೀನ್ ಸಿನಿಮಾಗಳನ್ನ ನಿರ್ದೇಶಿಸಿದ್ದರು. ಇವರ ಕಲಾ ವೃತ್ತಿಗೆ ಎರಡು ನ್ಯಾಷನಲ್ ಅವಾರ್ಡ್ಸ್, ಐದು ತೆಲುಗು ಸ್ಟೇಟ್ ಫಿಲ್ಮ್ ನಂದಿ ಅವಾರ್ಡ್ಸ್ ಹಾಗೂ 3 ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಕೂಡ ಸಂದಿವೆ.
ಬಾಲಕೃಷ್ಣ ನಟನೆಯ ಭೈರವ ದ್ವೀಪಂ ಸಿನಿಮಾ ಆ ಕಾಲಕ್ಕೆ ಬಿಗ್ಗೆಸ್ಟ್ ಎಕ್ಸ್‌ಪೆರಿಮೆಂಟ್. ಅಲ್ಲದೆ.. ಕಮಲ್ ಹಾಸನ್‌ರನ್ನ ವಿಚಿತ್ರ ಸೋದರುಲು ಸಿನಿಮಾದಲ್ಲಿ 3 ಅಡಿ ಕುಬ್ಜನನ್ನಾಗಿ ತೋರಿಸಿದ್ರು ಸಿಂಗೀತಂ ಶ್ರೀನಿವಾಸ್ ರಾವ್. ಇಡೀ ಜೀವಮಾನದುದ್ದಕ್ಕೂ ಇಂಥದ್ದೇ ಪ್ರಯೋಗಗಳನ್ನ ಮಾಡುತ್ತಾ, ಸಾವಿರಾರು ಮಂದಿ ನಿರ್ದೇಶಕರುಗಳಿಗೆ ಸ್ಫೂರ್ತಿಯಾದವರು ಸಿಂಗೀತಂ.
ಹೀಗೆ ಮೂರು ಜನರೇಷನ್ ಹೀರೋಗಳಿಗೆ ಆ್ಯಕ್ಷನ್ ಕಟ್ ಹೇಳಿದಂತಹ ಲೆಜೆಂಡರಿ ಡೈರೆಕ್ಟರ್ ಸಿಂಗೀತಂ ಶ್ರೀನಿವಾಸ್ ರಾವ್.. ಸೆಲ್ಯುಲಾಯ್ಡ್‌ನಿಂದ ಡಿಜಿಟಲ್ ತನಕ ಚಿತ್ರರಂಗದ ಏಳಿಗೆಯನ್ನ ಬಹಳ ಹತ್ತಿರದಿಂದ ಕಂಡಿದ್ದಾರೆ. ಅವರ ಅಗಲಿಕೆ ಇಂದು ಚಿತ್ರರಂಗಕ್ಕೆ ಅಪಾರ ನಷ್ಟ ಉಂಟುಮಾಡಿದೆ. ಚಿತ್ರರಂಗದ ಬಹುದೊಡ್ಡ ಕೊಂಡಿ ಕಳಚಿದ್ದು ಮಾತ್ರ ಸುಳ್ಳಲ್ಲ. ಸಾಧ್ಯವಾದ್ರೆ ಮತ್ತೆ ಹುಟ್ಟಿ ಬನ್ನಿ ಲೆಜೆಂಡ್. ನಿಮ್ಮ ಕುಟುಂಬಕ್ಕೆ ಆ ನೋವನ್ನು ಭರಿಸೋ ಶಕ್ತಿ ಭಗವಂತ ನೀಡಲಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
