ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ ನಂತರವೂ ಹೌಸ್‌ಫುಲ್ ಬೋರ್ಡುಗಳು ಚಿತ್ರಮಂದಿರಗಳ ಮುಂದೆ ಬೀಳುತ್ತಿರುವುದು ಸಿನಿಮಾದ ಯಶಸ್ಸಿನ ಸಾಕ್ಷಿಯಾಗಿದೆ.
ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ತಂದಿರುವ ಈ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇಂದು ಮೈಸೂರಿಗೆ ಭೇಟಿ ನೀಡಿದ್ದು, ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಗರ್ಭಗುಡಿಯಲ್ಲಿ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚಾಮುಂಡಿ ತಾಯಿಯ ಮುಂದೆ ನಿಂತು ಆಶೀರ್ವಾದ ಪಡೆದರು.
ಚಾಮುಂಡಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ಅವರನ್ನು ಕಂಡು ಅಭಿಮಾನಿಗಳು ಅವರ ಜೊತೆ ಸೆಲ್ಫಿಗೆ ಮುಗಿಬಿದ್ದರು. ರಿಷಬ್ ಸಹ ಅಭಿಮಾನಿಗಳೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿ, ಸೆಲ್ಫಿ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು, “ನಾನು ದೈವವನ್ನು ನಂಬುತ್ತೇನೆ, ಆರಾಧನೆ ಮಾಡುತ್ತೇನೆ. ದೈವದ ಅನುಮತಿಯನ್ನು ಪಡೆದು ಸಿನಿಮಾ ಮಾಡಿದ್ದೇನೆ” ಎಂದು ಹೇಳಿದರು.
ರಿಷಬ್ ಶೆಟ್ಟಿ ಮಾತನಾಡಿ, “ದೈವ-ದೇವರ ವಿಚಾರಗಳನ್ನು ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ, ನಾನು ಪ್ರತಿಕ್ರಿಯೆ ನೀಡಲ್ಲ” ಎಂದರು. ಸಿನಿಮಾ ತಂಡದ ಮೇಲೆ ದೈವದ ಆಶೀರ್ವಾದ ಇದೆ ಎಂದು ಅವರು ತಿಳಿಸಿದರು. ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು. ಕಾಂತಾರ ಚಿತ್ರದ ಮೂಲಕ ಕನ್ನಡ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆದಿದೆ ಎಂದು ಹೆಮ್ಮೆಯಿಂದ ಹೇಳಿದರು. ಕಾಂತಾರದ ನೆಕ್ಸ್ಟ್ ಚಾಪ್ಟರ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸೂಚಿಸಿದ ಅವರು, ತಮ್ಮ ಮುಂದಿನ ಚಿತ್ರ ‘ಜೈ ಹನುಮಾನ್’ಗೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದರು.
ಕಾಂತಾರ ಚಿತ್ರದ ಯಶಸ್ಸು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಮೆಚ್ಚುಗೆ ಗಳಿಸಿದೆ. ಚಿತ್ರದಲ್ಲಿ ತುಳುನಾಡಿನ ಸಾಂಸ್ಕೃತಿಕ ಅಂಶಗಳು, ದೈವಾರಾಧನೆಯ ದೃಶ್ಯಗಳು ಪ್ರೇಕ್ಷಕರನ್ನು ಸೆಳೆದಿವೆ. ಆದರೆ ಕೆಲವು ದೈವಾರಾಧಕರು ಚಿತ್ರದಲ್ಲಿ ದೈವದ ಚಿತ್ರಣವನ್ನು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಅವರ ಹೇಳಿಕೆ ಮಹತ್ವ ಪಡೆದಿದೆ. ಅವರು ದೈವದ ಅನುಮತಿ ಪಡೆದು, ಗೌರವಯುತವಾಗಿ ಚಿತ್ರಣ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಚಿತ್ರದ ಯಶಸ್ಸು ಇಡೀ ತಂಡದ ಕಠಿಣ ಪರಿಶ್ರಮದ ಫಲ ಎಂದು ಹೇಳಿದರು.