ನಗುಮುಖದ ಒಡೆಯ.. ಕರ್ನಾಟಕ ರತ್ನ.. ರಾಜರತ್ನ ಡಾ. ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲ ಅನ್ನೋ ಭಾವ ಎಂದೂ ಯಾರಿಗೂ ಬಂದಿಲ್ಲ. ಯಾಕಂದ್ರೆ ಅವ್ರು ಕೊಟ್ಟಿರೋ ನೆನಪುಗಳು ಅಂಥದ್ದು. ಇದೀಗ ಅವೆಲ್ಲವನ್ನು ಒಂದು ಆ್ಯಪ್ ಮೂಲಕ ಹಿಡಿದಿಡುವ ಕಾರ್ಯ ನಡೀತಿದೆ. ಅದಕ್ಕೆ ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೈ ಹಾಕಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಾಥ್ ನೀಡ್ತಿದ್ದಾರೆ.
ಲೋಹಿತ್ ಆಗಿ ಹುಟ್ಟಿ, ಇಡೀ ಲೋಕವೇ ಮೆಚ್ಚುವಂತಹ ರಾಜಕುಮಾರನಾದ್ರು ಪುನೀತ್ ರಾಜ್‌ಕುಮಾರ್. ಬಾಲ್ಯದಲ್ಲೇ ಬೆಟ್ಟದ ಹೂವಾಗಿ ರಾರಾಜಿಸಿದ ಅಪ್ಪು ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ನಟಸಾರ್ವಭೌಮನ ರಕ್ತ ಹಂಚಿಕೊಂಡು ಹುಟ್ಟಿದ ರಾಜರತ್ನ ಮುಂದೊಂದು ದಿನ ಕರ್ನಾಟಕ ರತ್ನ ಆಗಿ ಮಿಂಚಿದ್ರು. ನಟನಾಗಿ ಅಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳ ಸಾಕಾರಮೂರ್ತಿಯಾಗಿ ಅಪ್ಪು ಮ್ಯಾನ್ ಆಫ್ ಇನ್ಸ್‌ಪಿರೇಷನ್.
ಬರ್ತಿದೆ ಅಪ್ಪು ಆ್ಯಪ್.. ಆ ಅಭಿಮಾನ, ನಗು, ನೆನಪುಗಳ ತೇರು
ಅಕ್ಟೋಬರ್ 18ಕ್ಕೆ ಟ್ರೈಲರ್.. ಅಕ್ಟೋಬರ್ 25ಕ್ಕೆ ಆ್ಯಪ್ ಲಾಂಚ್
ಸೂರ್ಯನೊಬ್ಬ.. ಚಂದ್ರನೊಬ್ಬ.. ಈ ರಾಜನೂ ಒಬ್ಬ.. ಅನ್ನೋ ಮಾತುಗಳನ್ನ ಸುಮ್ ಸುಮ್ನೆ ಹೇಳಿಲ್ಲ. ಅವ್ರ ನಡೆ, ನುಡಿ, ಆಚಾರ, ವಿಚಾರಗಳನ್ನ ಆಧರಿಸಿಯೇ ಹೇಳಿರೋದು. ಬೊಂಬೆ ಕೂಡ ಹೇಳಿತ್ತು ಅಪ್ಪುನೇ ರಾಜಕುಮಾರ. ಹೌದು.. ಸದಾ ಅಸಹಾಯಕರಿಗಾಗಿ ಮಿಡಿಯುತ್ತಿದ್ದ ಅವರ ಹೃದಯ ನಿಜಕ್ಕೂ ರೋಲ್ ಮಾಡೆಲ್. ಇದೇ ಅಕ್ಟೋಬರ್ 29ಕ್ಕೆ ಅವರು ನಮ್ಮಿಂದ ಭೌತಿಕವಾಗಿ ದೂರವಾಗಿ ನಾಲ್ಕು ವರ್ಷಗಳಾಗ್ತಿದೆ. ಆದ್ರೆ ಮನಸುಗಳಿಂದ ಅಲ್ಲ.
ಸದ್ಯ ಅಪ್ಪು ಅವರ ಆ ನಗು, ಅಭಿಮಾನಿ ದೇವರುಗಳ ಆ ಅಭಿಮಾನ ಹಾಗೂ ಅವಿಸ್ಮರಣೀಯ ನೆನಪುಗಳನ್ನ ಕಾಪಿಡುವ ಕಾರ್ಯವನ್ನು ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಡ್ತಿದ್ದಾರೆ. ಹೌದು.. ಅಪ್ಪು ಪಿಆರ್‌ಕೆ ಆ್ಯಪ್ ಸಿದ್ದವಾಗ್ತಿದೆ. ಅದರಲ್ಲಿ ಅಪ್ಪು ಕುರಿತ A to Z ಸಮಗ್ರ ಮಾಹಿತಿ ಸಿಗಲಿದೆ. ಸಿನಿಮಾ, ಸಮಾಜಿಕ ಕಾರ್ಯಗಳು, ಅಭಿಮಾನಿಗಳ ಜೊತೆಗಿನ ಅನುಬಂಧ, ಕುಟುಂಬ, ಸಾಧನೆಗಳು ಎಲ್ಲಕ್ಕೂ ಈ ಅಪ್ಪು ಆ್ಯಪ್ ಕೈಗನ್ನಡಿ ಆಗ್ತಿದೆ.
ಪಿಆರ್‌ಕೆ ಒಡತಿ ಅಶ್ವಿನಿಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಸಾಥ್
ಅಪ್ಪು PRK ಆ್ಯಪ್‌ನಲ್ಲಿ ಏನೆಲ್ಲಾ ಇರಲಿದೆ..? ಇದು ಫ್ಯಾನ್‌ಡಮ್
ಇದು ಪವರ್‌ಸ್ಟಾರ್ ಫ್ಯಾನ್‌ಡಮ್ ಆ್ಯಪ್ ಆಗಿದ್ದು, ಅಪ್ಪು ಪಿಆರ್‌ಕೆ ಆ್ಯಪ್ ಹೆಸರಿನಲ್ಲಿ ಸದ್ಯ ಸಣ್ಣದೊಂದು ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಆ್ಯಪ್‌ನ ಸಿದ್ದಗೊಳಿಸಿದ್ದು, ಇದೇ ಅಕ್ಟೋಬರ್ 18ರಂದು ಅದರ ಪವರ್‌ಫುಲ್ ಟ್ರೈಲರ್ ಬಿಡುಗಡೆ ಆಗ್ತಿದೆ. ಅಕ್ಟೋಬರ್ 25ರಂದು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೇ ಈ ಅಪ್ಪು ಆ್ಯಪ್‌ನ ಲಾಂಚ್ ಮಾಡ್ತಿರೋದು ಮತ್ತೊಂದು ವಿಶೇಷ.
ಡಿಸಿಎಂ ಡಿಕೆಶಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಂತೆ ಇದು ಅಂಗೈಯಲ್ಲಿ ಅಪ್ಪು ಕಾನ್ಸೆಪ್ಟ್ ಎಂದಿದ್ದಾರೆ. ಅಪ್ಪು ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬುವುದು ಈ ಮೊಬೈಲ್ ಅಪ್ಲಿಕೇಷನ್‌ನ ಉದ್ದೇಶವಾಗಿದೆ. ಜೊತೆಗಿರದ ಜೀವ ಎಂದಿಗೂ ಜೀವಂತ.. ಆ ಜೀವ ಇದೀಗ ನಮ್ಮೆಲ್ಲರಿಗೂ ಮತ್ತಷ್ಟು ಹತ್ತಿರ ಆಗ್ತಿದ್ದಾರೆ ಅಂತ ಆ್ಯಪ್‌ನ ಲಾಂಚ್ ಮಾಡಲಿರೋ ಡಿಸಿಎಂ ಅದ್ಭುತ ಸಾಲುಗಳಿಂದ ಅಪ್ಪು ಆ್ಯಪ್ ಬಗ್ಗೆ ಪೋಸ್ಟ್ ಮಾಡಿದ್ದಾರೆ.