ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ತೂಗುದೀಪ, ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಈ ವೇಳೆ ಚಾರ್ಜಸ್ ಫ್ರೇಮ್‌ಗೆ ಸಂಬಂಧಿಸಿದ ಪ್ರಕ್ರಿಯೆ ನಡೆಯಲಿದ್ದು, ಆರೋಪಿಗಳ ಮೇಲಿನ ಆರೋಪಗಳು ಮತ್ತು ಐಪಿಸಿ ಸೆಕ್ಷನ್‌ಗಳ ಬಗ್ಗೆ ವಿವರಣೆ ನೀಡಲಾಗುವುದು.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ್, ಪವಿತ್ರ ಗೌಡ ಮತ್ತು ಇತರ 15 ಜನರ ವಿರುದ್ಧ ಈಗಾಗಲೇ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಕೋರ್ಟ್ ಈಗಾಗಲೇ ಎಲ್ಲಾ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಇಂದಿನ ವಿಚಾರಣೆಯಲ್ಲಿ ಆರೋಪಿಗಳ ಮೇಲಿನ ಆರೋಪಗಳ ಬಗ್ಗೆ ವಿವರವಾಗಿ ಚರ್ಚಿಸಲಾಗುವುದು.ನ್ಯಾಯಾಧೀಶರು ಆರೋಪಿಗಳಿಗೆ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುತ್ತಾರಾ ಅಥವಾ ತಿರಸ್ಕರಿಸುತ್ತಾರಾ ಎಂದು ಪ್ರಶ್ನಿಸಲಿದ್ದಾರೆ. ಈ ಪ್ರಕ್ರಿಯೆಯ ಬಳಿಕ, ವಿಚಾರಣೆಯ (ಟ್ರಯಲ್) ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಈ ಕೇಸ್‌ನಲ್ಲಿ ಒಟ್ಟು 262 ಸಾಕ್ಷಿಗಳು ಮತ್ತು 587 ದಾಖಲೆಗಳನ್ನು ಒಳಗೊಂಡ 13 ಸಂಪುಟಗಳ ಚಾರ್ಜ್‌ಶೀಟ್ ಇದ್ದು, ವಿಚಾರಣೆ ತೀವ್ರಗೊಳ್ಳುವ ನಿರೀಕ್ಷೆಯಿದೆ.