ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಆರೋಪಿಗಳ ಜೈಲು ವರ್ಗಾವಣೆ ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಆಗಸ್ಟ್ 30ಕ್ಕೆ ಮುಂದೂಡಿದೆ.
ಪವಿತ್ರಾ ಗೌಡ ಅವರ ಜಾಮೀನು ರ‍್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ನಿಗದಿಗೊಳಿಸಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9 ರವರೆಗೆ ವಿಸ್ತರಿಸಲಾಗಿದೆ.
64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಇಂದು ನಡೆದ ವಿಚಾರಣೆಯಲ್ಲಿ, ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೋಷ್, ಮತ್ತು ಜಗದೀಶ್ ಸೇರಿದಂತೆ ಐವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ವರ್ಗಾಯಿಸುವಂತೆ ಕೋರಿದ್ದಅರ್ಜಿಯನ್ನು ಪರಿಗಣಿಸಲಾಯಿತು. ಪ್ರದೋಷ್‌ನ ವಕೀಲರು ಈ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ದರ್ಶನ್ ಮತ್ತು ಇತರರ ವಕೀಲರು ಪ್ರತಿಕ್ರಿಯೆಗೆ ಸಮಯ ಕೇಳಿದರು. ಈ ಕಾರಣಕ್ಕೆ, ಜೈಲು ವರ್ಗಾವಣೆ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಲಾಯಿತು.
ಪವಿತ್ರಾ ಗೌಡ ಅವರ ವಕೀಲರು ಸ್ಟ್ಯಾಚುಟರಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ, ಚಾರ್ಜ್‌ಶೀಟ್ ಸಿಆರ್‌ಪಿಸಿ ಕಾಯ್ದೆಯಡಿ ಸಲ್ಲಿಕೆಯಾಗಿದ್ದು, ಹೊಸ ಬಿಎನ್‌ಎಸ್‌ಎಸ್ ಕಾಯ್ದೆಯಡಿ ಸಲ್ಲಿಕೆಯಾಗಿಲ್ಲ ಎಂದು ವಾದಿಸಿದರು. ಈ ವಾದಕ್ಕೆ ಪ್ರತಿಕ್ರಿಯೆಗೆ ಸಮಯ ಕೋರಿದ್ದರಿಂದ, ಜಾಮೀನು ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು, ಸೆಪ್ಟೆಂಬರ್ 9ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.