ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಮತ್ತೆ ಹಿನ್ನಡೆಯಾಗಿದೆ. ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಇದೇ ವೇಳೆ, ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ, ಸೆಪ್ಟೆಂಬರ್ 26ರಂದು ಆದೇಶ ಪ್ರಕಟಿಸಿ ಜಾಮೀನು ನಿರಾಕರಿಸಿದೆ. ಈ ಹಿಂದೆ ಸೆಪ್ಟೆಂಬರ್ 24ರಂದು ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಸಂಬಂಧ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಆ ಆದೇಶವನ್ನು ಮುಂದೂಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು.
ದರ್ಶನ್ ಪರ ವಕೀಲರಿಂದ ಏನು ವಾದ?
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸ್ವಲ್ಪ ಕಾಲ ಮುಂದೂಡಬೇಕು ಎಂದು ನ್ಯಾಯಾಲಯದ ಮುಂದೆ ವಾದಿಸಿದರು.
ಹೈಕೋರ್ಟ್‌ನ ಆದೇಶದ ಪ್ರತಿ ತಮಗೆ ಇತ್ತೀಚೆಗಷ್ಟೇ ಲಭ್ಯವಾಗಿದೆ. ಆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಹೀಗಾಗಿ, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಾದ ಸಮಯ ಬೇಕಿದೆ ಎಂದು ವಾದಿಸಿದರು.
ಪ್ರಾಸಿಕ್ಯೂಷನ್ ಬಯಸಿದರೆ ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸಬಹುದು. ಆದರೆ ಪ್ರದೋಷ್ ಅವರ ಹೇಳಿಕೆಯನ್ನು ಮಾತ್ರ ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ಹೈಕೋರ್ಟ್ ಸೂಚಿಸಿರುವ ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದು, ಅವರನ್ನು ನಂತರದ ಹಂತದಲ್ಲಿ ಸಾಕ್ಷಿಯಾಗಿ ವಿಚಾರಣೆ ನಡೆಸಬಹುದು ಎಂಬ ವಾದವನ್ನೂ ಮುಂದಿಟ್ಟರು.
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಆದ್ದರಿಂದ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಕೋರಿದರು.
ಪ್ರಾಸಿಕ್ಯೂಷನ್ ವಾದವೇನು?
ಇದಕ್ಕೆ ಪ್ರತಿಯಾಗಿ ಎಎಸ್‌ಪಿಪಿ ಸಚಿನ್ ಅವರು ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ವಾದಿಸಿದರು.
ಪ್ರದೋಷ್ ಅವರಿಗೆ ಈಗಾಗಲೇ ಸೆಪ್ಟೆಂಬರ್ 24ರಂದು ಸಮನ್ಸ್ ಜಾರಿಯಾಗಿದ್ದು, ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ಆದೇಶದ ನಂತರವೇ ಈ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ದರ್ಶನ್ ಸಲ್ಲಿಸಿರುವ ಅರ್ಜಿಯಲ್ಲಿ ಹೊಸದಾದ ಯಾವುದೇ ಮಾಹಿತಿ ಅಥವಾ ಹೊಸ ಸಂಗತಿ ಇಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅಲ್ಲಿ ವಿಚಾರಣೆ ನಡೆಯುವವರೆಗೆ ಪ್ರಕ್ರಿಯೆ ಮುಂದೂಡುತ್ತಾ ಹೋದರೆ ಪ್ರಕರಣಕ್ಕೆ ಅಂತ್ಯವೇ ಇರುವುದಿಲ್ಲ ಎಂಬ ಅರ್ಥದಲ್ಲಿ ಎಎಸ್‌ಪಿಪಿ ಸಚಿನ್ ಆಕ್ಷೇಪ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅದೂ ವಜಾಗೊಂಡರೆ ಮತ್ತೊಂದು ರಿವ್ಯೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅಂತಹ ಪ್ರಕ್ರಿಯೆಗೆ ತಿಂಗಳುಗಳೇ ಬೇಕಾಗಬಹುದು. ಹೀಗಾಗಿ ಕೇವಲ ಭವಿಷ್ಯದಲ್ಲಿ ಸಲ್ಲಿಸಬಹುದಾದ ಅರ್ಜಿಯ ಕಾರಣಕ್ಕೆ ಈಗಾಗಲೇ ನಿಗದಿಯಾಗಿರುವ ಸಾಕ್ಷಿ ಹೇಳಿಕೆ ಪ್ರಕ್ರಿಯೆಯನ್ನು ತಡೆಯಬಾರದು ಎಂದು ವಾದಿಸಿದರು.
