ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

ದೇ (3)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಪ್ರದೋಶ್‌ ಹಾಗೂ ವಿನಯ್‌ ಸಲ್ಲಿಸಿರುವ ಮಾಫಿ ಅರ್ಜಿಗಳ ವಿಚಾರವಾಗಿ ಬೆಂಗಳೂರಿನ 59ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ಇಂದು ತೀರ್ಪು ಹೊರಬೀಳಲಿದೆ. ಮಾಫಿ ಅರ್ಜಿಗಳನ್ನು ಕೋರ್ಟ್‌ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಇಂದು ಆದೇಶ ಹೊರಬೀಳುವ ನಿರೀಕ್ಷೆ ಮೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ತನಿಖೆ, ಆರೋಪಪಟ್ಟಿ ಹಾಗೂ ನ್ಯಾಯಾಲಯದ ವಿಚಾರಣೆ ಸೇರಿದಂತೆ ಹಲವು ಹಂತಗಳು ನಡೆದಿವೆ. ಇದೀಗ ಪ್ರಕರಣದ ಆರೋಪಿಗಳ ಪೈಕಿ A14 ಆರೋಪಿ ಪ್ರದೋಶ್‌ ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

ಪ್ರದೋಶ್‌ ಸಲ್ಲಿಸಿರುವ ಮಾಫಿ ಅರ್ಜಿಯನ್ನು ಸ್ವೀಕರಿಸಿ ಮುಂದಿನ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದಾರೆ. ಆದರೆ, ನಟ ದರ್ಶನ್‌ ಪರ ವಕೀಲ ಹಷ್ಮತ್‌ ಪಾಷಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ದರ್ಶನ್‌ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರತಿವಾದ ಮಂಡಿಸಿದ್ದಾರೆ.

ಇದರ ಬೆನ್ನಲ್ಲೇ ಪ್ರಕರಣದ ಮತ್ತೊಬ್ಬ ಆರೋಪಿ A10 ವಿನಯ್‌ ಕೂಡ ಮಾಫಿ ಅರ್ಜಿ ಸಲ್ಲಿಸಿರುವುದು ಕುತೂಹಲ ಹೆಚ್ಚಿಸಿದೆ. ಹೀಗಾಗಿ ಇಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಪ್ರಾಸಿಕ್ಯೂಷನ್‌ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಇಂದು ತಿಳಿಯಲಿದೆ.

ಮಾಫಿ ಅರ್ಜಿ ಸ್ವೀಕಾರವಾಗುತ್ತಾ?

ಮಾಫಿ ಅರ್ಜಿ ಸಲ್ಲಿಸುವ ಮೂಲಕ ಆರೋಪಿಯೊಬ್ಬರು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಇಂತಹ ಅರ್ಜಿಯನ್ನು ಕೋರ್ಟ್‌ ನೇರವಾಗಿ ಅಂಗೀಕರಿಸುವುದಿಲ್ಲ. ಅರ್ಜಿಯ ಸ್ವರೂಪ, ಪ್ರಕರಣದ ಸಂದರ್ಭ ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯ ನಿರ್ಧರಿಸಬೇಕಾಗುತ್ತದೆ.

ಹೀಗಾಗಿ ಇಂದು 59ನೇ ಸಿಸಿಹೆಚ್‌ ನ್ಯಾಯಾಲಯ ನೀಡಲಿರುವ ಆದೇಶದ ಮೇಲೆ ಎಲ್ಲರ ಗಮನ ನೆಟ್ಟಿದೆ. ಮಾಫಿ ಅರ್ಜಿಗಳನ್ನು ಸ್ವೀಕರಿಸಿ ಅವುಗಳ ಕುರಿತು ಮುಂದಿನ ಹಂತದಲ್ಲಿ ವಾದ-ಪ್ರತಿವಾದಕ್ಕೆ ಅವಕಾಶ ನೀಡಬೇಕೇ ಅಥವಾ ಅರ್ಜಿಗಳನ್ನು ತಿರಸ್ಕರಿಸಬೇಕೇ ಎಂಬುದರ ಕುರಿತು ಕೋರ್ಟ್‌ ತನ್ನ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.

ದರ್ಶನ್‌ ಪ್ರಕರಣದ ಮೇಲೆ ಪರಿಣಾಮ ಏನು?

ಒಂದು ವೇಳೆ ನ್ಯಾಯಾಲಯ ಮಾಫಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡಿದರೆ, ಪ್ರಕರಣದಲ್ಲಿ ಹೊಸ ಬೆಳವಣಿಗೆಗಳಿಗೆ ದಾರಿ ತೆರೆಯಬಹುದು. ಮಾಫಿ ಸಾಕ್ಷಿಯಾಗಲು ಅವಕಾಶ ಸಿಕ್ಕರೆ ಸಂಬಂಧಪಟ್ಟ ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆಗಳು ಅಥವಾ ಮಾಹಿತಿಗಳನ್ನು ನ್ಯಾಯಾಲಯ ಪರಿಗಣಿಸುವ ಪರಿಸ್ಥಿತಿ ಎದುರಾಗಬಹುದು. ಇದು ಪ್ರಕರಣದ ಮುಂದಿನ ವಿಚಾರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದೇ ಕಾರಣಕ್ಕೆ ಪ್ರದೋಶ್‌ ಹಾಗೂ ವಿನಯ್‌ ಸಲ್ಲಿಸಿರುವ ಮಾಫಿ ಅರ್ಜಿಗಳು ದರ್ಶನ್‌ ಪರ ವಾದಕ್ಕೂ ಮಹತ್ವದ ವಿಷಯವಾಗಿವೆ.

Exit mobile version