ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ

Untitled design 2025 08 16t161255.408

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಕೆಲ ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾದಾಗಿನಿಂದ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದ ನಟಿ ರಮ್ಯಾ, ದರ್ಶನ್‌ ಅವರ ಜಾಮೀನು ರದ್ದಾದ ಬಳಿಕ ತೀರ್ಪಿನ ಕುರಿತು ದೀರ್ಘ ಆಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಈ ಬಾರಿಯ ಜೈಲುವಾಸ ಕಳೆದ ಬಾರಿಗಿಂತಲೂ ಸುದೀರ್ಘವಾಗಿರಬಹುದು ಎಂದು ಊಹಿಸಲಾಗಿದೆ. ಇದಕ್ಕೂ ಮುನ್ನ, ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಆಡಿದ್ದ ಕೆಲವು ಮಾತುಗಳಿಂದಾಗಿ, ದರ್ಶನ್ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದರಿಂದ ಕೆಲವು ಅಭಿಮಾನಿಗಳ ವಿರುದ್ಧ ರಮ್ಯಾ ದೂರು ದಾಖಲಿಸಿದ್ದು, ಇದರ ಪರಿಣಾಮ ಕೆಲವರನ್ನು ಬಂಧಿಸಲಾಗಿತ್ತು. ಇದೀಗ ನಟ ದರ್ಶನ್ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಆದರೆ, ಇದು ನಟಿ ರಮ್ಯಾಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

ದರ್ಶನ್‌ ಅವರ ಜಾಮೀನು ರದ್ದಾದ ಬಗ್ಗೆ ರಮ್ಯಾ ದೀರ್ಘವಾದ ಆಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಸುಪ್ರೀಂ ಕೋರ್ಟ್‌ನ ತೀರ್ಪು ಬಂದಾಗ ನನಗೆ ಮಿಶ್ರ ಭಾವನೆಗಳು ಕಾಡಿದವು. ಮೊದಲಿಗೆ ಸ್ವಲ್ಪ ಬೇಜಾರಾಯಿತು, ಏಕೆಂದರೆ ದರ್ಶನ್ ನನಗೆ ಪರಿಚಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ತಮ್ಮ ಜೀವನವನ್ನು ಹಾಳುಮಾಡಿಕೊಂಡಿದ್ದು, ನನಗೆ ನೋವುಂಟುಮಾಡಿತ್ತು. ಒಟ್ಟಿಗೆ ಕೆಲಸ ಮಾಡುವಾಗ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಅವರು ನನ್ನ ಬಳಿ ಹೇಳಿಕೊಂಡಿದ್ದರು. ಚಿತ್ರರಂಗದಲ್ಲಿ ಈ ಸ್ಥಾನಕ್ಕೆ ಬರಲು ಪಟ್ಟ ಕಷ್ಟಗಳ ಬಗ್ಗೆ ನನ್ನೊಟ್ಟಿಗೆ ಹಂಚಿಕೊಂಡಿದ್ದರು. ಅದನ್ನು ಕೇಳಿ ನನಗೆ ಅವರ ಬಗ್ಗೆ ಹೆಮ್ಮೆ ಇತ್ತು.”

ಆದರೆ ಇತ್ತೀಚಿನ ಅವರ ನಡವಳಿಕೆಗಳು ನನ್ನನ್ನು ಬೇಸರಗೊಳಿಸಿದವು. ಅವರ ಸುತ್ತಲಿನ ಜನರು ಒಳ್ಳೆಯವರಿರಲಿಲ್ಲವೇ ಎಂದು ಗೊತ್ತಿಲ್ಲ. ಅವರನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುವವರು ಇರಲಿಲ್ಲವೇನೋ ಎನಿಸುತ್ತದೆ. ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕೆ ಏರಿದಾಗ, ಒಳ್ಳೆಯ ಸಲಹೆಗಾರರು ಸುತ್ತಲಿರಬೇಕು. ಇಲ್ಲವಾದರೆ ದಾರಿತಪ್ಪುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಪ್ರಕರಣಕ್ಕೂ ಮುನ್ನ ಪವಿತ್ರಾ ಗೌಡ ಯಾರೆಂದು ನನಗೆ ಗೊತ್ತಿರಲಿಲ್ಲ. ಆದರೆ ಅವರೂ ಒಬ್ಬ ತಾಯಿ, ಅವರಿಗೊಬ್ಬ ಮಗಳಿದ್ದಾಳೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳದೆ, ಕಾನೂನಿನ ಪ್ರಕಾರ ನಡೆದುಕೊಂಡಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಯೋಚಿಸಬೇಕು, ವಿಶೇಷವಾಗಿ ನಮ್ಮ ಕುಟುಂಬ ಮತ್ತು ಮಕ್ಕಳ ಬಗ್ಗೆ. ಕೋಪ ಎಲ್ಲರಿಗೂ ಬರುತ್ತದೆ, ಜೀವನದಲ್ಲಿ ಒಳ್ಳೆಯ ಘಟನೆಗಳು ಮಾತ್ರ ನಡೆಯುವುದಿಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು.

ರೇಣುಕಾಸ್ವಾಮಿ ಕುಟುಂಬ ಬಡವರಾಗಿದ್ದು, ರೇಣುಕಾ ಸ್ವಾಮಿಯ ಪತ್ನಿಗೆ ಇತ್ತೀಚೆಗಷ್ಟೇ ಮಗು ಜನಿಸಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಅವರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.

 

Exit mobile version