ರಾಜಸ್ಥಾನದ ಸುಂದರ ನಗರಿ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮಗಳು ಭರ್ಜರಿಯಾಗಿ ಆರಂಭಗೊಂಡಿವೆ. ಹಲವು ವರ್ಷಗಳ ಸ್ನೇಹ ಮತ್ತು ಪ್ರೀತಿಯ ಬಳಿಕ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಬುಧವಾರ (ಫೆಬ್ರವರಿ 25) ಬೆಳಗ್ಗೆ ಹಳದಿ ಶಾಸ್ತ್ರ ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಳದಿ ಶಾಸ್ತ್ರವು ಭಾರತೀಯ ವಿವಾಹ ಸಂಪ್ರದಾಯದಲ್ಲಿ ಮಹತ್ವದ್ದಾಗಿದೆ. ಮದುವೆಯ ಮೊದಲು ವರ-ವಧುವಿಗೆ ಹಳದಿ ಹಚ್ಚಿ ಶುಭಾಶಯ ಕೋರುವ ಈ ಸಂಪ್ರದಾಯದಲ್ಲಿ ಕುಟುಂಬದವರು ಮತ್ತು ಆಪ್ತರು ಭಾಗವಹಿಸುತ್ತಾರೆ. ರಶ್ಮಿಕಾ ಮತ್ತು ವಿಜಯ್ ಈ ಕ್ಷಣಗಳನ್ನು ಬಹಳ ಸರಳ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ. ಹಳದಿ ಬಣ್ಣದ ಉಡುಪಿನಲ್ಲಿ ಮಿಂಚಿದ ಜೋಡಿ ಅಭಿಮಾನಿಗಳ ಗಮನ ಸೆಳೆದಿದೆ.
ಈ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಟಿ ಆಶಿಕಾ ರಂಗನಾಥ್ ಕೂಡ ಭಾಗವಹಿಸಿದ್ದಾರೆ. ರಶ್ಮಿಕಾ ಅವರ ಆತ್ಮೀಯ ಸ್ನೇಹಿತೆಯಾಗಿರುವ ಆಶಿಕಾ, ಮದುವೆ ಕಾರ್ಯಕ್ರಮಕ್ಕಾಗಿ ಸಿನಿಮಾ ಶೂಟಿಂಗ್‌ಗಳಿಗೆ ವಿರಾಮ ನೀಡಿ ಉದಯಪುರಕ್ಕೆ ತೆರಳಿದ್ದಾರೆ. ಹಳದಿ ಶಾಸ್ತ್ರಕ್ಕೆ ಸಜ್ಜಾಗಿ ನಿಂತಿರುವ ತಮ್ಮ ಫೋಟೋವನ್ನು ಅವರು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ರಶ್ಮಿಕಾ ಮದುವೆಗೆ ಕನ್ನಡ ಚಿತ್ರರಂಗದಿಂದ ಕೆಲವೇ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಇದೆ. ಕಾರ್ಯಕ್ರಮವನ್ನು ಖಾಸಗಿ ರೀತಿಯಲ್ಲಿ ಆಯೋಜಿಸಲಾಗಿದ್ದು, ಕೇವಲ 100 ಮಂದಿಗೆ ಮಾತ್ರ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಹಳದಿ ಶಾಸ್ತ್ರದ ನಂತರ ಬುಧವಾರ ರಾತ್ರಿ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಕುಟುಂಬದವರು ಹಾಗೂ ಆಪ್ತರು ಹಾಡಿ, ಕುಣಿದು ಸಂಭ್ರಮಿಸಲಿದ್ದಾರೆ. ಮದುವೆಯ ಮುನ್ನ ನಡೆಯುವ ಸಂಗೀತ್ ಸಂಭ್ರಮ ಸ್ಟಾರ್ ಜೋಡಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಫೆಬ್ರವರಿ 26ರಂದು ಮುಖ್ಯ ವಿವಾಹ ಸಮಾರಂಭ ನಡೆಯಲಿದೆ. ಸಪ್ತಪದಿ ತುಳಿಯುವ ಮೂಲಕ ರಶ್ಮಿಕಾ ಮತ್ತು ವಿಜಯ್ ತಮ್ಮ ಹೊಸ ಬದುಕಿನತ್ತ ಹೆಜ್ಜೆ ಇಡಲಿದ್ದಾರೆ. ಮದುವೆಯ ನಂತರ ನಡೆಯುವ ಆರತಕ್ಷತೆ ಕಾರ್ಯಕ್ರಮದಲ್ಲಿ ಇನ್ನಷ್ಟು ಸಿನಿ ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.
ತೆಲುಗು ಚಿತ್ರರಂಗದಿಂದ ಆರಂಭಿಸಿ ಬಾಲಿವುಡ್ ಹಾಗೂ ಇತರೆ ಭಾಷೆಗಳಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿರುವ ರಶ್ಮಿಕಾ ಮತ್ತು ವಿಜಯ್, ಇದೀಗ ಜೀವನದ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೆಂಬ ಸುದ್ದಿಗಳ ಮಧ್ಯೆ ಇದೀಗ ಮದುವೆ ಘೋಷಣೆ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ವಿರೋಶ್’ ಜೋಡಿಯ ಮದುವೆ ಸಂಭ್ರಮ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.