ಬೆಂಗಳೂರು (ಆ.3): ಮದುವೆಯಾದ ಬಳಿಕ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೆ ಗಾಯವಾಗಿದೆ. ಸಾಲು ಸಾಲು ಗಾಯಗಳು ಅವರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಸದಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು, ವರ್ಕೌಟ್ ಹಾಗೂ ಡ್ಯಾನ್ಸ್ ಎಂದು ಬ್ಯುಸಿಯಾಗಿರುತ್ತಿದ್ದ ನಟಿಗೆ ಮತ್ತೆ ಗಾಯವಾಗಿದ್ದು, ಸದ್ಯ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ತಮ್ಮ ಗಾಯದ ಬಗ್ಗೆ ಅಭಿಮಾನಿಗಳಿಗೆ ಆತಂಕವಾಗಬಾರದು ಎಂದು ಆದಷ್ಟು ಮುಚ್ಚಿಡಲು ಯತ್ನಿಸಿದ್ದ ರಶ್ಮಿಕಾ, ಅಂತಿಮವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಪ್ಡೇಟ್ ನೀಡಿದ್ದಾರೆ.
ಡ್ಯಾನ್ಸ್ ಶೂಟ್ ವೇಳೆ ಘಟಿಸಿದ ಅನಾಹುತ
ತಮ್ಮ ಮುಂಬರುವ ಬಿಗ್ ಬಜೆಟ್‌ನ ‘ಮೈಸಾ’ (Mysaa) ಚಿತ್ರದ ಡ್ಯಾನ್ಸ್ ಶೂಟಿಂಗ್ ವೇಳೆ ರಶ್ಮಿಕಾ ಮಂದಣ್ಣ ಅವರಿಗೆ ಗಾಯವಾಗಿದೆ. “ಮೈಸಾ ನಾನು ನಟಿಸುತ್ತಿರುವ ಅತ್ಯಂತ ಅಗ್ರೆಸಿವ್ ಸಿನಿಮಾ. ಈ ಸಿನಿಮಾದ ಡ್ಯಾನ್ಸ್ ಶೂಟ್ ಮಾಡುತ್ತಿದ್ದಾಗ ನನಗೆ ಸೊಂಟದ ಭಾಗಕ್ಕೆ ಪೆಟ್ಟಾಯಿತು. ನಮ್ಮ ಸೊಂಟದ ಭಾಗದಿಂದ ಕಾಲಿಗೆ ಸಂಪರ್ಕ ಕಲ್ಪಿಸುವ 4 ಪ್ರಮುಖ ಟೆಂಡನ್‌ಗಳಲ್ಲಿ ಬಲಬದಿಯ ಒಂದು ಟೆಂಡನ್‌ನ ಸ್ಥಾನಪಲ್ಲಟವಾಗಿದೆ. ಅದು ಮತ್ತೆ ಯಥಾಸ್ಥಿತಿಗೆ ಬರುವವರೆಗೆ ನಾನು ಕಾಲನ್ನು ಎತ್ತಲು ಅಥವಾ ಸರಿಯಾಗಿ ಮೂವ್ ಮಾಡಲು ಸಾಧ್ಯವಿಲ್ಲ” ಎಂದು ತಮಗಾದ ಗಾಯದ ಬಗ್ಗೆ ಸ್ವತಃ ರಶ್ಮಿಕಾ ವಿವರವಾಗಿ ವಿವರಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ 3ನೇ ಇಂಜುರಿ
ತಮ್ಮ ದೇಹವನ್ನು ಮಷಿನ್ನಂತೆ ದಂಡಿಸುತ್ತಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಶ್ಮಿಕಾ, “ನನ್ನ ದೇಹವನ್ನು ಯಂತ್ರದಂತೆ ನೋಡಿಕೊಳ್ಳುವುದನ್ನು ಬಿಟ್ಟು ಮನುಷ್ಯನ ದೇಹದಂತೆ ನೋಡುವುದನ್ನು ಮೊದಲು ಕಲಿಯಬೇಕು. ಇದು ನನಗೆ ಸಾಲು ಸಾಲಾಗಿ ಆದ 3ನೇ ಗಾಯ. ಇವೆಲ್ಲವೂ ತೀರ ವಿಚಿತ್ರವಾಗಿ ನಡೆದ ಆಕಸ್ಮಿಕಗಳು. ನಾನಾಗಿಯೇ ಎಂದೂ ಬ್ರೇಕ್ ತಗೊಳ್ಳಲ್ಲ ಅಂತ ದೇವರಿಗೆ ಗೊತ್ತಾಗಿ, ತಾನೇ ಬಲವಂತವಾಗಿ ನನಗೆ ಈ ಹೋಟೆಲ್/ಮನೆಯ ರಜೆಯನ್ನು ಕೊಟ್ಟಿದ್ದಾನೆ ಅನಿಸುತ್ತಿದೆ” ಎಂದು ತಮಾಷೆಯ ಶೈಲಿಯಲ್ಲಿ ಬರೆದುಕೊಂಡಿದ್ದಾರೆ.
Hie guyssss!🥰❤️
Injuries suck.. 😩 and I was really hoping that no one will get to know.. but well 🐒🤷🏻♀️
Sorry I’ve been MIA 🐒 but hieeee! I’m hereeee!🙋🏻♀️😁
It happened awhile ago ya and this is my 3rd injury back to back.. 🤦🏻♀️
I should definitely learn to treat my body like a… pic.twitter.com/yJj70yEyAE— Rashmika Mandanna (@iamRashmika) August 3, 2026
ಸ್ವೀಟ್ ತಿನ್ನುವ ಭಯ, ಪಝಲ್ ಆಟದಲ್ಲಿ ಬ್ಯುಸಿ
ಶೂಟಿಂಗ್‌ನಿಂದ ಬ್ರೇಕ್ ಸಿಕ್ಕಿರುವುದಕ್ಕೆ ಧನಾತ್ಮಕವಾಗಿಯೇ ಸ್ಪಂದಿಸಿರುವ ನಟಿ, ಮನೆಯಲ್ಲಿದ್ದುಕೊಂಡು ದಿನವಿಡೀ ಪಝಲ್‌ಗಳನ್ನು (Puzzles) ಬಿಡಿಸುತ್ತಿದ್ದಾರೆ. “ನಾನು ಪಝಲ್ ಬಿಡಿಸುವುದರಲ್ಲಿ ಇಷ್ಟೊಂದು ಎಕ್ಸ್ಪರ್ಟ್ ಅಂತ ನನಗೇ ಗೊತ್ತಿರಲಿಲ್ಲ” ಎಂದಿದ್ದಾರೆ.
ಇದರ ಮಧ್ಯೆ ತೂಕ ಹೆಚ್ಚಾಗುವ ಭಯವೂ ನಟಿಯನ್ನು ಕಾಡುತ್ತಿದೆ. “ನಾನು ನಿರಂತರವಾಗಿ ಜಿಮ್, ರನ್ನಿಂಗ್ ಮಾಡುತ್ತಿದ್ದರಿಂದ ದೇಹವನ್ನು ಸರಿಯಾದ ಶೇಪ್‌ನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗ ಗಾಯದಿಂದಾಗಿ ರನ್ನಿಂಗ್, ವರ್ಕೌಟ್ ಮಾಡುವಂತಿಲ್ಲ. ವರ್ಕೌಟ್ ಮಾಡದಿದ್ದರೆ ನನಗೆ ಸಿಹಿ ತಿಂಡಿಗಳನ್ನು ತಿನ್ನಬೇಕು ಅನಿಸುತ್ತದೆ. ಹೀಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ನನಗೆ ದೊಡ್ಡ ಸವಾಲಾಗಿದೆ” ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
‘ಅಭಿಮಾನಿಗಳೇ ಹೆದರಬೇಡಿ…’
ಗಾಯದಿಂದ ನೋವಿದ್ದರೂ ಅದು ತಡೆಯಲಾರದಷ್ಟು ತೀವ್ರವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ರಶ್ಮಿಕಾ ಮಂದಣ್ಣ, “ನನಗೋಸ್ಕರ ಯಾರೂ ಚಿಂತಿಸಬೇಡಿ, ಪ್ರೀತಿ, ಮುದ್ದು ಹಾಗೂ ಅಪ್ಪುಗೆಗಳು” ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ರಶ್ಮಿಕಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ
ರಶ್ಮಿಕಾ ಅವರ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಮತ್ತು ಸಹನಟಿಯರು ಕೂಡ ರಶ್ಮಿಕಾ ಅವರ ಬೇಗನೆ ಚೇತರಿಕೆಗಾಗಿ ಶುಭ ಕೋರುತ್ತಿದ್ದಾರೆ.
