ಬೆಂಗಳೂರು: ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರ ಇತ್ತೀಚಿನ ಲುಕ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್‌ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯ ದೇಹದ ಆಕಾರ, ತೂಕ ಅಥವಾ ವಯಸ್ಸನ್ನು ಆಧರಿಸಿ ಹೋಲಿಕೆ ಮಾಡುವುದು ಹಾಗೂ ಅವಹೇಳನಕಾರಿ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ರಮ್ಯಾ ತಮ್ಮ ಎಕ್ಸ್ ಖಾತೆಯ ಮೂಲಕ ಖಡಕ್ ಸಂದೇಶ ನೀಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮವೊಂದಕ್ಕೆ ಕತ್ರೀನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದರು. ಈ ವೇಳೆ ಕ್ಯಾಮೆರಾಗಳಿಗೆ ನಟಿ ಪೋಸ್ ನೀಡಿದ್ದು, ಅವರ ದೇಹದಲ್ಲಿ ಬದಲಾಗಿರುವ ಬಗ್ಗೆ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಕತ್ರೀನಾ ಅವರ ದೇಹದ ಆಕಾರ ಮತ್ತು ತೂಕದ ಕುರಿತು ಕೆಲವರು ಟ್ರೋಲ್ ಮಾಡಿದ್ದರೆ, ಇನ್ನೂ ಕೆಲವರು ನಟಿಯ ಪರವಾಗಿ ನಿಂತಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯ ದೇಹವನ್ನು ‘ಪ್ರೈಮ್ ಹಂತ’ ಮತ್ತು ‘ಮುಕ್ತಾಯದ ಹಂತ’ ಎಂದು ವಿಂಗಡಿಸುವ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಮಹಿಳೆಯ ಜೀವನದಲ್ಲಿ ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಆಕೆ ಅತ್ಯುತ್ತಮವಾಗಿ ಕಾಣುತ್ತಾಳೆ ಎಂಬ ಕಲ್ಪನೆಯೇ ತಪ್ಪು ಎಂದು ಅವರು ಹೇಳಿದ್ದಾರೆ.
ಮಹಿಳೆಯ ‘ಅತ್ಯುತ್ತಮ ಹಂತ’ ಎಂದರೆ ಮ್ಯಾಗಜೀನ್ ಮುಖಪುಟದಲ್ಲಿರುವ ಮಾಡೆಲ್‌ನಂತೆ ಕಾಣುವ ಕೆಲವು ವರ್ಷಗಳು ಮಾತ್ರವೇ ಎಂದು ನಿರ್ಧರಿಸಿದವರು ಯಾರು? ಎಂಬ ಪ್ರಶ್ನೆಯನ್ನು ರಮ್ಯಾ ಎತ್ತಿದ್ದಾರೆ. ಮಹಿಳೆಯ ಜೀವನದ ವಿವಿಧ ಹಂತಗಳಲ್ಲಿ ದೇಹದಲ್ಲಿ ಸಹಜ ಬದಲಾವಣೆಗಳು ಸಂಭವಿಸುತ್ತವೆ. ಗರ್ಭಧಾರಣೆ, ಪ್ರಸವ ಸೇರಿದಂತೆ ಜೀವನದ ಹಲವು ಹಂತಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳನ್ನು ಅವನತಿ ಎಂದು ನೋಡುವ ಬದಲು ಬದುಕಿನ ಸಹಜ ಭಾಗವಾಗಿ ಪರಿಗಣಿಸಬೇಕು ಎಂಬುದು ಅವರ ನಿಲುವಾಗಿದೆ.
ರಮ್ಯಾ ಅವರ ಪ್ರಕಾರ, ಮಹಿಳೆಯ ಅತ್ಯುತ್ತಮ ಹಂತವನ್ನು ಕೇವಲ ದೇಹದ ಆಕಾರ ಅಥವಾ ಸಣ್ಣ ಸೊಂಟದ ಅಳತೆಯಿಂದ ನಿರ್ಧರಿಸಲು ಸಾಧ್ಯವಿಲ್ಲ. ಆಕೆಯ ಶಕ್ತಿ, ವಿವೇಕ, ವೃತ್ತಿಜೀವನ, ಸಂತೋಷ, ಸಾಧನೆ ಮತ್ತು ಆಕೆ ತನ್ನ ಜೀವನದಲ್ಲಿ ಕಟ್ಟಿಕೊಂಡಿರುವ ಎಲ್ಲವೂ ಆಕೆಯ ಮೌಲ್ಯದ ಭಾಗವಾಗಿದೆ. ಹೀಗಾಗಿ ಕತ್ರೀನಾ ಕೈಫ್ ಅವರು ತಮ್ಮ ಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ. ಇದೇ ರೀತಿ ಪ್ರತಿಯೊಬ್ಬ ಮಹಿಳೆಯೂ ಜೀವನದ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ರೀತಿಯಲ್ಲಿ ಅತ್ಯುತ್ತಮವಾಗಿರುತ್ತಾಳೆ ಎಂಬ ಸಂದೇಶವನ್ನು ನೀಡಿದ್ದಾರೆ.
ಇನ್ನು ಕತ್ರೀನಾ ಪರವಾಗಿ ಮಾತನಾಡುವ ಸಂದರ್ಭದಲ್ಲಿ ಕೆಲವರು ಆಕೆಯ ಆರ್ಥಿಕ ಯಶಸ್ಸು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಉಲ್ಲೇಖಿಸಿರುವುದಕ್ಕೂ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಬ್ಬ ಮಹಿಳೆ ಆರ್ಥಿಕವಾಗಿ ಯಶಸ್ವಿಯಾಗಿದ್ದಾಳೆ ಎಂಬ ಕಾರಣಕ್ಕೆ ಮಾತ್ರ ಆಕೆಯನ್ನು ದೇಹದ ಕುರಿತ ಟೀಕೆಗಳಿಂದ ರಕ್ಷಿಸಬೇಕೇ? ಕಡಿಮೆ ಹಣ ಹೊಂದಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅದೇ ರೀತಿ ಕತ್ರೀನಾ ಅವರಿಗೆ ಮಗುವಾಗಿರುವುದರಿಂದ ತೂಕ ಹೆಚ್ಚಾಗಿರುವುದು ಸಹಜ ಎಂದು ಸಮರ್ಥಿಸುವುದಕ್ಕೂ ರಮ್ಯಾ ವಿರೋಧ ವ್ಯಕ್ತಪಡಿಸಿದ್ದಾರೆ. ಮಗುವಾಗಿರುವ ಕಾರಣಕ್ಕೆ ಮಾತ್ರ ದೇಹದ ಬದಲಾವಣೆಯನ್ನು ಒಪ್ಪಿಕೊಳ್ಳಬೇಕೆಂದಾದರೆ, ಮಗುವಾಗಿರದ ಮಹಿಳೆಯ ತೂಕವನ್ನು ತಪ್ಪು ಎಂದು ಪರಿಗಣಿಸಬೇಕೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಮಹಿಳೆಯ ದೇಹವನ್ನು ಗೌರವಿಸುವುದಕ್ಕೆ ಯಾವುದೇ ಷರತ್ತು ಇರಬಾರದು ಎಂಬುದು ರಮ್ಯಾ ಅವರ ಸಂದೇಶದ ಸಾರವಾಗಿದೆ. ಹಣ, ವಯಸ್ಸು, ವೃತ್ತಿ, ವೈವಾಹಿಕ ಸ್ಥಿತಿ ಅಥವಾ ತಾಯ್ತನ ಯಾವುದೂ ದೇಹದ ಆಕಾರದ ಆಧಾರದ ಮೇಲೆ ಮಹಿಳೆಯನ್ನು ಅವಮಾನಿಸುವುದಕ್ಕೆ ಕಾರಣವಾಗಬಾರದು ಎಂದು ಅವರು ಹೇಳಿದ್ದಾರೆ.
