ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲುಪಾಲಾಗಿರುವ ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ರನ್ಯಾ ರಾವ್ ಅವರು ಇನ್ನಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮೂಲಕ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ.
ಮಾರ್ಚ್ 03 ರಂದು ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಇದೀಗ ಜಾಮೀನು ಅರ್ಜಿ ವಜಾ ಆಗಿದ್ದು, ಇನ್ನಷ್ಟು ದಿನ ಪರಪ್ಪನ ಅಗ್ರಹಾರದಲ್ಲಿಯೇ ಕಳೆಯಬೇಕಿದೆ ರನ್ಯಾ.
ಈ ಸಂಬಂಧ ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟಿ ರನ್ಯಾ ರಾವ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.
ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅವರು ವಿಚಾರಣೆಯ ವೇಳೆ ಸರಿಯಾಗಿ ಸಹಕರಿಸಿಲ್ಲ. ತನಿಖೆ ಬಾಕಿ ಇದೆ. ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಡಿಆರ್‌ಐ ಪರ ವಕೀಲರು ವಾದಿಸಿದ್ದರು.
ಈ ಎಲ್ಲಾ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯವು ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಮತ್ತೊಬ್ಬ ಅರೆಸ್ಟ್
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ನ ಅಕ್ರಮ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ನಟಿಗೆ ಸಹಾಯ ಮಾಡಿದ ಆರೋಪಿ ಸಾಹಿಲ್ ಜೈನ್ ಎಂಬುವವನನ್ನು ಕಂದಾಯ ಗುಪ್ತಚರ ಇಲಾಖೆ (DRI) ಬಂಧಿಸಿದೆ. ಬಳ್ಳಾರಿ ಜಿಲ್ಲೆಯ ಚಿನ್ನ ವ್ಯಾಪಾರಿಯಾಗಿದ್ದ ಸಾಹಿಲ್, ರನ್ಯಾರಾವ್‌ಗೆ ವಿದೇಶದಿಂದ ಚಿನ್ನವನ್ನು ಬೆಂಗಳೂರಿಗೆ ತರುವುದರಿಂದ ಹಿಡಿದು ಮಾರಾಟದವರೆಗೆ ಸಕ್ರಿಯವಾಗಿ ನೆರವು ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಯಾರು ಈ ಸಾಹಿಲ್ ಜೈನ್?
ಸಾಹಿಲ್‌ನ ಕುಟುಂಬ ಬಳ್ಳಾರಿಯ ಬ್ರಾಹ್ಮಣ ರಸ್ತೆ ಸಮೀಪದ ನಿವಾಸಿ. ಇವರ ತಂದೆ ಮಹೇಂದ್ರ ಜೈನ್ ಮತ್ತು ಸಹೋದರರು ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ. ಸಾಹಿಲ್ ಇತ್ತೀಚೆಗೆ ಮುಂಬೈನಲ್ಲಿ ತನ್ನ ಸೋದರ ಮಾವನೊಂದಿಗೆ ವಾಸವಾಗಿದ್ದು, ಅಲ್ಲಿ ಚಿನ್ನದ ವ್ಯಾಪಾರದೊಂದಿಗೆ ಸಂಬಂಧ ಹೊಂದಿದ್ದಾನೆ. ಈ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಹೊತ್ತುವ ಆರೋಪದಲ್ಲಿ ಅವನನ್ನು DRI ಬಂಧಿಸಿತ್ತು.
ರನ್ಯಾ ಮತ್ತು ಸಾಹಿಲ್‌ನ ಸಂಬಂಧ?
ತನಿಖೆಯ ಪ್ರಕಾರ, ರನ್ಯಾ ಮತ್ತು ಸಾಹಿಲ್‌ನ ಪರಿಚಯ ಹಲವು ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ರನ್ಯಾ ದುಬೈಯಿಂದ ಅಕ್ರಮವಾಗಿ ತಂದ ಚಿನ್ನವನ್ನು ಬೆಂಗಳೂರಿನಲ್ಲಿ ಸಾಹಿಲ್ ಮಾರಾಟ ಮಾಡುತ್ತಿದ್ದ. ವಾಟ್ಸಾಪ್ ಚಾಟ್‌ಗಳು, ಲಾವಾರಿಸ್ ಹಣದ ಹಂಚಿಕೆ ಮತ್ತು ಚಿನ್ನದ ಗಟ್ಟಿಗಳ ವ್ಯವಹಾರದ ದಾಖಲೆಗಳು ಇಬ್ಬರ ನಡುವಿನ ಸಂಬಂಧವನ್ನು ಖಚಿತಪಡಿಸಿವೆ. ಸಾಹಿಲ್‌ನ ಕುಟುಂಬಕ್ಕೆ ಕಂದಾಯ ಗುಪ್ತಚರ ಇಲಾಖೆ (DRI) ನೀಡಿರುವ ಅರೆಸ್ಟ್ ಮೆಮೋದಲ್ಲಿ ಈ ವಿವರಗಳು ದಾಖಲಾಗಿವೆ.
ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ರನ್ಯಾ ಮತ್ತು ಸಾಹಿಲ್‌ನ ಚಾಟ್‌ಗಳನ್ನು ರಿಕವರ್ ಮಾಡಿದ ನಂತರ, ಚಿನ್ನದ ವ್ಯಾಪಾರದ ಸರಪಳಿ ಬಹಿರಂಗವಾಗಿದೆ. ರನ್ಯಾ ವಿದೇಶದಿಂದ ಚಿನ್ನವನ್ನು ಗುಪ್ತವಾಗಿ ತಂದರೆ, ಸಾಹಿಲ್ ಅದನ್ನು ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ. ಈ ವ್ಯವಹಾರದಿಂದ ಸಾಹಿಲ್ ಲಾಭಾಂಶವನ್ನು ಪಡೆದಿದ್ದಾನೆ ಎಂಬ ಆರೋಪವು ಇದೆ.
ರಣ್ಯಾ ರಾವ್ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಕಂದಾಯ ಗುಪ್ತಚರ ಇಲಾಖೆ (DRI) ಬಂಧಿಸಿದೆ. ಸಾಹಿಲ್‌ನ ಬಂಧನವು ಈ ಸಂಚಿನ ಹಿಂದಿನ ಹೆಚ್ಚಿನ ವ್ಯಕ್ತಿಗಳನ್ನು ಬಹಿರಂಗಪಡಿಸಬಹುದು ಎನ್ನಲಾಗಿದೆ.