ಕಾಂತಾರ ಚಿತ್ರದ ದೈವಾರಾಧನೆ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ, ದೈವವನ್ನ ಅಣುಕಿಸಿದ್ದ ಬಾಲಿವುಡ್ ನಟ ರಣ್ವೀರ್ ಸಿಂಗ್, ಚಾಮುಂಡಿ ತಾಯಿಯ ಮೊರೆ ಹೋಗಿದ್ದಾರೆ. ಸದ್ಯ ಬಾಲಿವುಡ್‌ನಿಂದ ಬ್ಯಾನ್ ಆಗಿರೋ ರಣ್ವೀರ್, ದಿಢೀರ್ ಅಂತ ಮೈಸೂರಿನಲ್ಲಿ ಪ್ರತ್ಯಕ್ಷವಾಗಿ, ಪಾಪದ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೈ ಹಿಡಿಯೋ ಮೂಲಕ ಕರ್ನಾಟಕದ ಅಳಿಮಯ್ಯ ಅನಿಸಿಕೊಂಡಿರೋ ಬಿಟೌನ್‌ನ ಸ್ಟಾರ್ ನಟ ಅಂದ್ರೆ ಅದು ರಣ್ವೀರ್ ಸಿಂಗ್. ಧುರಂಧರ್ ಸಿನಿಮಾಗೂ ಮುನ್ನ ಅಂದ್ರೆ 2025ರ ನವೆಂಬರ್ 28ರಂದು ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನ ಕ್ಲೋಸಿಂಗ್ ಸೆರಮನಿಯನ್ನ ರಣ್ವೀರ್ ನಿರೂಪಣೆ ಮಾಡಿದ್ರು. ಅಂದು ಸೂಪರ್ ಸ್ಟಾರ್ ರಜನಿಕಾಂತ್, ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಗೋವಾ ಸಿಎಂ ಸೇರಿದಂತೆ ಸಾಕಷ್ಟು ಮಂದಿ ಗಣ್ಯರು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೈವನ ಅಣುಕಿಸಿದ್ದ ರಣ್ವೀರ್ ಸಿಂಗ್ ಮೈಸೂರಿನಲ್ಲಿ ಪ್ರತ್ಯಕ್ಷ
ತಾಯಿ ಚಾಮುಂಡೇಶ್ವರಿ ಮುಂದೆ ಮಂಡಿಯೂರಿದ ಸ್ಟಾರ್
ರಿಷಬ್ ಶೆಟ್ಟಿಗೆ ಹಾಯ್ ಹೇಳೋಕೆ ಅಂತ ಬಂದಂತಹ ರಣ್ವೀರ್ ಸಿಂಗ್, ಕಾಂತಾರ ಚಿತ್ರದಲ್ಲಿ ರಿಷಬ್ ಮಾಡಿದಂತೆ ಮಾಡಲು ಹೋಗಿ, ದೈವವನ್ನ ಅನುಕರಿಸಿದ್ದರು. ಅಷ್ಟೇ ಅಲ್ಲ, ಚಾಮುಂಡಿಯನ್ನ ಹೆಣ್ಣು ದೆವ್ವ ಅಂತ ಅಪಮಾನ ಕೂಡ ಮಾಡಿದ್ರು. ಇದರಿಂದ ಕನ್ನಡಿಗರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ರಣ್ವೀರ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ, ಈ ಕುರಿತು ಪ್ರಶಾಂತ್ ಮಿಥೆಲ್ ಅನ್ನೋ ವಕೀಲರು ರಣ್ವೀರ್ ವಿರುದ್ಧ ಹೈ ಕೋರ್ಟ್‌ನಲ್ಲಿ ಪ್ರಕರಣ ಕೂಡ ದಾಖಲಿಸಿದ್ರು.
ಇದು ಉದ್ದೇಶಪೂರ್ವಕವಾಗಿ ನಡೆದಿರೋದಲ್ಲ. ಆದಾಗ್ಯೂ ಸಹ ಯಾರಿದ್ರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಅಂತ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಿ, ಕನ್ನಡಿಗರಿಗೆ ಕ್ಷಮೆ ಕೂಡ ಕೇಳಿದ್ರು. ಅಲ್ಲದೆ ಕೋರ್ಟ್‌ನಲ್ಲಿ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದರು. ಆದ್ರೆ ದೂರುದಾರ ವಕೀಲ ಪ್ರಶಾಂತ್ ನಟ ರಣ್ವೀರ್ ಸಿಂಗ್ ನೇರವಾಗಿ ತಾಯಿ ಚಾಮುಂಡೇಶ್ವರಿ ಆಲಯಕ್ಕೆ ಬಂದು ಕ್ಷಮೆ ಕೇಳಬೇಕು ಎಂದಿದ್ದರು. ಅದಕ್ಕೆ ರಣ್ವೀರ್ ವಕೀಲರು ಕೂಡ ಗ್ರೀನ್ ಸಿಗ್ನಲ್ ನೀಡಿದ್ರು.
ಗೋವಾ ಫಿಲ್ಮ್ ಫೆಸ್ಟ್‌ನಲ್ಲಿ ಕಾಂತಾರ ದೈವದ ಅನುಕರಣೆ..!
ಹೈ ಕೋರ್ಟ್, ಕನ್ನಡಿಗರಿಗೆ ಬೇಷರತ್ ಕ್ಷಮೆ ಕೇಳಿದ್ದ ನಟ
ಅದರಂತೆ ಡಾನ್-3 ಚಿತ್ರದಿಂದ ಹೊರಬಂದ ರಣ್ವೀರ್‌ನ ಬಾಲಿವುಡ್ ಬ್ಯಾನ್ ಮಾಡ್ತಿದ್ದಂತೆ ನೇರವಾಗಿ ಅರಮನೆ ನಗರಿ ಮೈಸೂರಿಗೆ ಆಗಮಿಸಿದ್ದಾರೆ ಧುರಂಧರ್ ಸ್ಟಾರ್. ಚಾಮುಂಡಿ ಬೆಟ್ಟಕ್ಕೆ ತೆರಳಿ, ಶ್ರೀಸಾಮಾನ್ಯನಂತೆ ಸರತಿ ಸಾಲಿನಲ್ಲಿ ಬಂದು ತಾಯಿ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದಿದ್ದಾರೆ. ಗರ್ಭಗುಡಿಯ ತನಕ ಮಾಸ್ಕ್ ಧರಿಸಿಯೇ ಬಂದಂತಹ ರಣ್ವೀರ್, ನಂತ್ರ ಮಾಸ್ಕ್ ಕಳಚಿ, ತಾಯಿಯ ಮುಂದೆ ನಿಂತು ಬೇಷರತ್ ಕ್ಷಮೆ ಕೇಳಿ, ಪಾಪ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.
