ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮಾಡಿದ ಒಂದು ಮಾತು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕಾಂತಾರ ಚಾಪ್ಟರ್ 1 ಚಿತ್ರವನ್ನು ಹೊಗಳುವ ವೇಳೆ, ಅವರು ಕರಾವಳಿಯ ಜನರಿಗೆ ಅತ್ಯಂತ ಪವಿತ್ರವಾದ ಚಾವುಂಡಿ ದೈವವನ್ನು ‘ದೆವ್ವ’ ಎಂದು ಉಲ್ಲೇಖಿಸಿದ್ದರು. ಈ ಒಂದು ಪದವೇ ಭಕ್ತರಲ್ಲಿ ಅಸಮಾಧಾನ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
IFFI ವೇದಿಕೆಯಲ್ಲಿ ರಿಷಬ್ ಶೆಟ್ಟಿಯನ್ನು ನೋಡಿದ ರಣವೀರ್ ಸಿಂಗ್ ಉತ್ಸಾಹದಿಂದ ಅವರ ಅಭಿನಯವನ್ನು ಹೊಗಳಲು ಶುರುಮಾಡಿದ್ದರು. “ಕಾಂತಾರ ಚಾಪ್ಟರ್ 1 ಅತ್ಯುತ್ತಮ ಸಿನಿಮಾ. ವಿಶೇಷವಾಗಿ ಸ್ತ್ರೀ ದೆವ್ವ (ಚಾವುಂಡಿ ದೈವ) ರಿಷಬ್ ದೇಹದೊಳಗೆ ಹೋದಾಗದ ಆ ದೃಶ್ಯ – ಅದ್ಭುತ!” ಎಂದು ಮಾತನಾಡಿದ್ದರು. ಈ ಮಾತುಗಳಲ್ಲಿರುವ ‘ದೆವ್ವ’ ಪದವೇ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ #ApologiseRanveer, #RespectDaiva ಟ್ರೆಂಡ್ ಆಗಿ, ರಣವೀರ್ ವಿರುದ್ಧ ಆಕ್ರೋಶದ ಅಲೆ ಎದ್ದಿತು.
ವೇದಿಕೆಗೆ ಬರುವ ಮುನ್ನವೇ ರಿಷಬ್ ಶೆಟ್ಟಿ ರಣವೀರ್‌ಗೆ ಸೂಚನೆ ನೀಡಿದ್ದರು. ರಣವೀರ್ “ಕಾಂತಾರ” ಡೈಲಾಗ್ ಇಮಿಟೇಟ್ ಮಾಡುತ್ತಿದ್ದಾಗ, ರಿಷಬ್ “ಇದನ್ನು ಇಲ್ಲಿ ಮಾಡಬೇಡಿ ಸಾರ್” ಎಂಬಂತೆ ಕೈ ಸನ್ನೆ ಮಾಡಿದ್ದರು. ಆದರೂ ರಣವೀರ್ ಉತ್ಸಾಹದಲ್ಲಿ ಮಾತನಾಡಿ ವಿವಾದಕ್ಕೆ ಸಿಲುಕಿದರು.
ಈ ಘಟನೆಗೆ ಸಂಬಂಧಿಸಿದಂತೆ ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದೀರ್ಘ ಕ್ಷಮಾಪಣಾ ಸಂದೇಶ ಹಾಕಿದ್ದಾರೆ. “ನನ್ನ ಉದ್ದೇಶ ರಿಷಬ್ ಅವರ ಅದ್ಭುತ ಅಭಿನಯವನ್ನು ಮೆಚ್ಚುವುದಷ್ಟೇ ಆಗಿತ್ತು. ನಟನಿಂದ ನಟನಿಗೆ ಆ ದೃಶ್ಯವನ್ನು ಅವರು ಮಾಡಿದ ರೀತಿ ಎಷ್ಟು ದೊಡ್ಡ ಸಾಧನೆ ಎಂಬುದು ನನಗೆ ಗೊತ್ತು. ಅದಕ್ಕೆ ಅತ್ಯಂತ ಗೌರವವಿದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ, ನಂಬಿಕೆಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಅದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಇದುವರೆಗೂ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ. ಆದರೆ ಅವರ ಅಭಿಮಾನಿಗಳು “ದೈವ ನಂಬಿಕೆ ಎಂಬುದು ರಿಷಬ್‌ಗೆ ಜೀವನ, ಅದನ್ನು ಗೌರವಿಸದವರಿಗೆ ಒಂದು ದಿನ ತಿಳಿಯುತ್ತದೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
