ಬೆಂಗಳೂರು: ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ತಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ಡೇಟಿಂಗ್ ಗಾಸಿಪ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿನಯ್ ರಾಜ್‌ಕುಮಾರ್ ಜೊತೆಗಿನ ಡೇಟಿಂಗ್ ಊಹಾಪೋಹಗಳ ಬೆನ್ನಲೇ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, ಮಹಿಳೆಯರ ಬಗ್ಗೆ ತೀರ್ಪು ನೀಡುವ ಸಂಕುಚಿತ ಮನಸ್ಥಿತಿಯನ್ನು ಟೀಕಿಸಿದ್ದಾರೆ.
“ದಯವಿಟ್ಟು ಮಹಿಳೆಯರ ಬಗ್ಗೆ ಜಡ್ಜ್ ಮಾಡುವುದನ್ನು ನಿಲ್ಲಿಸಿ. ನಾನು ನನ್ನ ಪುರುಷ ಸ್ನೇಹಿತರ ಜೊತೆ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೆಲ್ಲಾ, ಜನರು ನಾನು ಅವರನ್ನು ಮದುವೆಯಾಗುತ್ತೇನೆ ಇಲ್ಲವೇ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಭಾವಿಸುತ್ತಾರೆ. ಇಂತಹ ಸಂಕುಚಿತ ಆಲೋಚನೆಗಳನ್ನು ಬಿಟ್ಟುಬಿಡುವ ಸಮಯ ಇದು. ನಾನು ಯಾರನ್ನಾದರೂ ಡೇಟಿಂಗ್ ಮಾಡಿದರೆ ಅಥವಾ ಮದುವೆಯಾದರೆ, ನಾನೇ ಖುದ್ದಾಗಿ ಘೋಷಿಸುತ್ತೇನೆ. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಲು ನನಗೆ ಸ್ವಾತಂತ್ರ್ಯವಿದೆ,” ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಖಾರವಾಗಿ ಹೇಳಿದ್ದಾರೆ.
ನಟಿ ರಮ್ಯಾ ಮುಂದುವರೆದು, “ಜನರು ತಮ್ಮ ಸಣ್ಣ ಮನಸ್ಥಿತಿಯನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಆದರೆ, ನಾನು ‘ಸೆಲೆಬ್ರಿಟಿ’ ಎಂಬ ಕಾರಣಕ್ಕೆ ಪೋಸ್ಟ್ ಮಾಡುವಾಗ ಹೆಚ್ಚು ‘ಜವಾಬ್ದಾರಿಯುತ’ವಾಗಿರಬೇಕೆಂದು ನಿರೀಕ್ಷಿಸುವುದು ದುಃಖಕರ ತಪ್ಪೊಪ್ಪಿಗೆ,” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ನ ಮೂಲಕ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಸಮಾಜದ ಸ್ಟೀರಿಯೊಟೈಪ್ ಧೋರಣೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ.