ಕಲರ್ಸ್ ಕನ್ನಡದಲ್ಲಿ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ ‘ರಾಮಾಚಾರಿ’ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇದೇ ಗುರುವಾರ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ‘ರಾಮಾಚಾರಿ’ಯನ್ನು ಚೂರಿ ಚುಚ್ಚಿ ಕೊಲ್ಲುವ ಮತ್ತು ಆ ನಂತರದ ದಿನಗಳಲ್ಲಿ ರಾಮಾಚಾರಿಯ ಸಾವಿನ ಪರಿಣಾಮದಿಂದ ಆಗುವ ಎಪಿಸೋಡ್ ಗಳು ಪ್ರಸಾರವಾಗಲಿವೆ.
ವಿಲನ್ ಗ್ಯಾಂಗ್ ಹಾಕೇ ಬಿಡ್ತು ರಾಮಾಚಾರಿಗೆ ಚೂರಿ !
‘ರಾಮಾಚಾರಿ’ ಧಾರಾವಾಹಿಯ ವಿಲನ್ ಗಳ ಗ್ಯಾಂಗ್ – ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ. ಇವರೆಲ್ಲ ಸೇರಿ ರಾಮಾಚಾರಿಯನ್ನು ಕೊಲ್ಲುವ ಯೋಜನೆಯನ್ನು ರೂಪಿಸುತ್ತಾರೆ. ಅವನನ್ನು ಕಟ್ಟಡವೊಂದಕ್ಕೆ ಮೋಸದಿಂದ ಕರೆದೊಯ್ಯುತ್ತಾರೆ. ಅಲ್ಲಿ ಒಂದು ನಾಟಕೀಯ ಮತ್ತು ತೀವ್ರ ಹೋರಾಟದ ದೃಶ್ಯ ಬಿಚ್ಚಿಕೊಳ್ಳುತ್ತದೆ. ರಾಮಾಚಾರಿ ಎಷ್ಟೇ ಪ್ರತಿರೋಧ ತೋರಿಸಿದರೂ ಗ್ಯಾಂಗ್ ಅವನನ್ನು ಚೂರಿ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತದೆ. ತಮ್ಮ ಶತ್ರುವನ್ನು ನಾಶ ಪಡಿಸಿದ ಖುಷಿಯಲ್ಲಿ ಅವರು ಸಂಭ್ರಮಿಸುತ್ತಾರೆ. ಈ ನಡುವೆ ಚಾರು, ಉಳಿದ ಕುಟುಂಬ ಮತ್ತು ಅಗ್ರಹಾರದ ಜನರು ತಮ್ಮ ಪ್ರೀತಿಯ ರಾಮಾಚಾರಿಯ ಸಾವಿನ ಶೋಕಾಚರಣೆಯಲ್ಲಿರುತ್ತಾರೆ.