ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ವಿವಾಹವು ಅದ್ದೂರಿಯಾಗಿ ನೆರವೇರಿದ ಬೆನ್ನಲ್ಲೇ, ಈಗ ಜೋಡಿಯ ಮೆಹೆಂದಿ ಸಮಾರಂಭದ (Mehendi ceremony) ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗಾಗಲೇ ಸಾಂಪ್ರದಾಯಿಕವಾಗಿ ಮದುವೆಯಾಗಿ ಮನೆಮಾತಾಗಿರುವ ಈ ಜೋಡಿ, ತಮ್ಮ ಮದುವೆ ಪೂರ್ವದ ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಆ ಚಿತ್ರಗಳನ್ನು ನೋಡಿ ಖುಷಿಯಿಂದ ಕಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕುಟುಂಬದವರು, ಆಪ್ತರು ಹಾಗೂ ಕೆಲವು ಸಿನಿ ತಾರೆಯರು ಭಾಗಿಯಾಗಿದ್ದರು. ಮದುವೆಯ ನಂತರ ವಿಜಯ್ ಅವರ ಹುಟ್ಟೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬಳಿಕ ಹೈದರಾಬಾದ್‌ನಲ್ಲಿ ಭರ್ಜರಿ ಆರತಕ್ಷತೆ ಕೂಡ ನಡೆಸಲಾಯಿತು. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆಗಳು ಆಧುನಿಕ ಶೈಲಿಯಲ್ಲಿ ನಡೆಯುತ್ತವೆ ಎಂಬ ಅಭಿಪ್ರಾಯ ಇದ್ದು, ಈ ಜೋಡಿ ಹಿಂದೂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮದುವೆಯಾದುದು ಗಮನಸೆಳೆಯಿತು. ಉಡುಗೆ ತೊಡುಗೆಯಿಂದ ಹಿಡಿದು ಮದುವೆಯ ವಿಧಿವಿಧಾನಗಳವರೆಗೂ ಎಲ್ಲವೂ ಸಂಪ್ರದಾಯಬದ್ಧವಾಗಿಯೇ ನಡೆದಿತ್ತು.
ಇತ್ತೀಚೆಗೆ ಅವರು ಹಂಚಿಕೊಂಡಿರುವ ಮೆಹೆಂದಿ ಸಮಾರಂಭದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಫೆಬ್ರವರಿ 25ರಂದು ನಡೆದ ಈ ಮೆಹೆಂದಿ ಹಾಗೂ ‘ಪ್ರಧಾನಂ’ ಸಮಾರಂಭಕ್ಕಾಗಿ ವಧು-ವರರು ವಿಶೇಷ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಕರಣ್ ತೋರಣಿ ಅವರ ವಿನ್ಯಾಸದ ಉಡುಪುಗಳನ್ನು ಅವರು ಧರಿಸಿದ್ದರು.
ಮೆಹೆಂದಿ ಫೋಟೋಗಳನ್ನು ಹಂಚಿಕೊಂಡ ವಿಜಯ್ ದೇವರಕೊಂಡ ಅವರು, “25.02.26 – ಪ್ರಧಾನಂ ಮತ್ತು ಮೆಹೆಂದಿ ಸಂಜೆ. ಇದು ತುಂಬಾ ಮೋಜಿನ ಸಂಜೆ. ಪ್ರತಿಯೊಂದು ಕ್ಷಣವನ್ನೂ ಸಂಪೂರ್ಣವಾಗಿ ಬದುಕಿದ ಕ್ಷಣಗಳು” ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ನಟಿ ರಶ್ಮಿಕಾ ಕೂಡ ತಮ್ಮ ಪೋಸ್ಟ್‌ನಲ್ಲಿ, “25.02.26ರಂದು ನಡೆದ ಪ್ರಧಾನಂ ಮತ್ತು ಮೆಹೆಂದಿ ಸಂಜೆ ತುಂಬಾ ಪರಿಪೂರ್ಣವಾಗಿತ್ತು. ಸಮಯ ಹೇಗೆ ಕಳೆದುಹೋಯಿತು ಎಂಬುದೇ ಗೊತ್ತಾಗಲಿಲ್ಲ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು “ವಿರೋಶ್ ಜೋಡಿ ಸೂಪರ್”, “ಇಬ್ಬರೂ ಒಟ್ಟಿಗೆ ಸಖತ್ ಕ್ಯೂಟ್ ಕಾಣುತ್ತಿದ್ದಾರೆ”, “ಇದು ನಿಜವಾದ ಫೇರಿ ಟೇಲ್ ಮದುವೆ” ಎಂಬಂತೆ ಮೆಚ್ಚುಗೆಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇದರ ನಡುವೆ ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಭಾವನಾತ್ಮಕ ಸಂದೇಶವೂ ಗಮನ ಸೆಳೆದಿದೆ. ಧಾಮಿನಿ ಎಂಬ ಅಭಿಮಾನಿ ರಶ್ಮಿಕಾ ಬಗ್ಗೆ ಬರೆದ ಭಾವನಾತ್ಮಕ ಟ್ವೀಟ್ ಅನ್ನು ಅವರು ರೀ-ಟ್ವೀಟ್ ಮಾಡಿದ್ದಾರೆ.
ಆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರಶ್ಮಿಕಾ, “ಇಷ್ಟು ದಿನ ನನ್ನ ಬಗ್ಗೆ ಬರೆದ ಅನೇಕ ವಿಚಾರಗಳನ್ನು ಓದಿದ್ದೇನೆ. ಆದರೆ ಇಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದದ್ದು ಇದೇ ಮೊದಲು. ನಾನು ಹೇಳಲು ಬಯಸುವವು ಬಹಳಷ್ಟು ಇದ್ದರೂ, ಹೇಳುವುದು ಕಡಿಮೆ. ನಾನು ನನ್ನದೇ ಆದ ಒಂದು ಸ್ಥಳವನ್ನು ಹುಡುಕುತ್ತಿದ್ದೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಹೇಳಿದ್ದಾರೆ.
ಅದೇ ವೇಳೆ ಪ್ರೀತಿಯ ಬಗ್ಗೆ ಮಾತನಾಡಿದ ಅವರು, “ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಹುಡುಕಿಕೊಳ್ಳಿ” ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮವು ಅಭಿಮಾನಿಗಳಿಗೆ ಸಂತೋಷ ತಂದಿದ್ದು, ಅವರ ಮೆಹೆಂದಿ ಸಮಾರಂಭದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
