ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಅವರು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಯುವಕನ ಕಾಲು ಮುರಿತಗೊಂಡ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದ ಈ ಅಪಘಾತದಲ್ಲಿ ಯುವಕ ವೇಣುಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ಎಡಗಾಲಿನ ಮೂಳೆ ಮುರಿತವಾಗಿದೆ.
ವೇಣುಗೋಪಾಲ ತನ್ನ ಸ್ನೇಹಿತೆಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ರಕ್ಷಕ್ ಬುಲೆಟ್ ಚಲಾಯಿಸುತ್ತಿದ್ದ ಕಾರು ತಿರುವಿನಲ್ಲಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವೇಣುಗೋಪಾಲನ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.
ಅಪಘಾತ ನಡೆದ ಕೂಡಲೇ ಸ್ಥಳೀಯರು ಮತ್ತು ಇತರ ಸವಾರರು ವೇಣುಗೋಪಾಲನಿಗೆ ಸಹಾಯ ಮಾಡಿದರು. ತಕ್ಷಣವೇ ಟ್ಯಾಕ್ಸಿಯಲ್ಲಿ ಅವರನ್ನು ಹೆಬ್ಬಾಳದ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ತಪಾಸಣೆಯಲ್ಲಿ ವೇಣುಗೋಪಾಲನ ಎಡಗಾಲಿನ ಮೂಳೆ ಮುರಿತವಾಗಿರುವುದು ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಣುಗೋಪಾಲನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ರಕ್ಷಕ್ ಬುಲೆಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಜಾಗರೂಕ ಚಾಲನೆ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರೆದಿದೆ.