ಕನ್ನಡ ಕಿರುತೆರೆಯ ಖ್ಯಾತ ಕಾಮಿಡಿ ಕಲಾವಿದ, ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ವಿಜೇತ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ದಿಢೀರ್ ನಿಧನರಾಗಿದ್ದಾರೆ. ಈ ಘಟನೆ ಮೇ 12, 2025 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರ್‌ನಲ್ಲಿ ಸಂಬಂಧಿಕರೊಬ್ಬರ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ನಡೆದಿದೆ.
ಸಂಬಂಧಿಕರೊಬ್ಬರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ಅವರು, ಕಾರ್ಯಕ್ರಮದಲ್ಲಿ ಸಂತೋಷದಿಂದ ಕುಣಿಯುತ್ತಿದ್ದರು. ಆದರೆ, ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ರಾಕೇಶ್ ಕುಣಿಯುತ್ತಿರುವ ಕೊನೆಯ ಕ್ಷಣಗಳ ವಿಡಿಯೋ ಲಭ್ಯವಾಗಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದು, ಡ್ಯಾನ್ಸ್ ಮಾಡೋ ವೇಳೆ ಅವರು ಎದೆ ಹಿಡಿದುಕೊಂಡಿರೋದು ಕಂಡು ಬಂದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ನೇಹಿತರು ತಕ್ಷಣವೇ ರಾಕೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ, ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು. ವೈದ್ಯರ ಪ್ರಕಾರ, ರಾಕೇಶ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ರಾಕೇಶ್ ಪೂಜಾರಿ ರಾಜ್ಯಾದ್ಯಂತ ಜನಪ್ರಿಯರಾಗಿದ್ದರು. ಕಿರುತೆರೆಯ ಜೊತೆಗೆ, ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿದ್ದ ರಾಕೇಶ್, ‘ಕಾಂತಾರ’ ಚಿತ್ರದಂತಹ ದೊಡ್ಡ ಯೋಜನೆಗಳಲ್ಲಿ ಭಾಗಿಯಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ, ಸಹ ಕಲಾವಿದ ರಕ್ಷಿತಾ ಪ್ರೇಮ್ ಭಾವುಕರಾಗಿ, “ನಿನ್ನ ಜೊತೆ ಇನ್ಯಾವಾಗಲೂ ಮಾತಾಡೋಕೆ ಆಗಲ್ಲ ಮಗನೇ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.