ನಟ ವಿಜಯ್ ಸಿಎಂ ಆಗಿದ್ದು ನನಗೆ ಶಾಕ್ ಆಯ್ತು: ಸೂಪರ್ ಸ್ಟಾರ್ ರಜನಿಕಾಂತ್

Untitled design 2026 05 17T115646.131

ಚೆನ್ನೈ: ತಮಿಳುನಾಡು ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಸುದ್ದಿಗೋಷ್ಠಿ ನಡೆಸಿ, ತಮ್ಮ ರಾಜಕೀಯ ನಿಲುವು ಕುರಿತು ಸ್ಪಷ್ಟನೆ ನೀಡಿದ್ದಾರೆ. ಟಿವಿಕೆ ಪಕ್ಷ ಅಧಿಕಾರಕ್ಕೆ ಬಂದಿರುವುದು ಮತ್ತು ನಟ ವಿಜಯ್ ಮುಖ್ಯಮಂತ್ರಿಯಾಗಿರುವುದು ಆಘಾತ ತಂದಿದೆ ಎಂದು ಅವರು ಹೇಳಿದ್ದಾರೆ.

ವಿಜಯ್ ಸಿಎಂ ಆಗಿರೋದು ನಿಜಕ್ಕೂ ಶಾಕ್ ಕೊಟ್ಟಿದೆ. ಟಿವಿಕೆ ಪಕ್ಷದ ಗೆಲುವಿನಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ರಜನಿಕಾಂತ್ ತಮ್ಮ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿ ಮಾಡಿದ್ದರು. ಈ ಭೇಟಿಗೆ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಆ ಬಗ್ಗೆ ಪ್ರತಿಕ್ರಿಯಿಸಿದ ರಜನಿ, “ನನ್ನ ಮತ್ತು ಸ್ಟಾಲಿನ್ ಅವರ ನಡುವಿನ ಬಾಂಧವ್ಯ ರಾಜಕೀಯವನ್ನು ಮೀರಿದ್ದು. ಅದು ವೈಯಕ್ತಿಕ ಸಂಬಂಧ” ಎಂದು ಹೇಳಿದರು.

ಕುಳತ್ತೂರ್ ಕ್ಷೇತ್ರದಲ್ಲಿ ಸ್ಟಾಲಿನ್ ಸೋತಿದ್ದು ತಮಗೆ ತುಂಬಾ ಬೇಸರ ತಂದಿದೆ ಎಂದೂ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. “ಸ್ಟಾಲಿನ್ ಅವರಂತಹ ಹಿರಿಯ ನಾಯಕ ಸೋಲು ಕಂಡಿದ್ದು ನನ್ನನ್ನು ನೋಯಿಸಿದೆ. ಆದರೆ ವಿಜಯ್ ಅವರ ಗೆಲುವಿಗೆ ನಾನು ಶುಭಾಶಯ ಕೂಡ ತಿಳಿಸಿದ್ದೇನೆ. ನಾನು ಸತ್ಯವನ್ನು ಒಪ್ಪಿಕೊಳ್ಳುತ್ತೇನೆ” ಎಂದು ರಜನಿಕಾಂತ್ ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ನಿಲುವಿನ ಕುರಿತು ಸಾಕಷ್ಟು ಟೀಕೆಗಳು ಬಂದ ಹಿನ್ನೆಲೆ ಈ ಸುದ್ದಿಗೋಷ್ಠಿ ಕರೆದಿದ್ದಾಗಿ ಅವರು ತಿಳಿಸಿದರು. “ನಾನು ಯಾವತ್ತೂ ಯಾರ ಪಕ್ಷದ ವಿರುದ್ಧವೂ ಮಾತನಾಡಿಲ್ಲ. ಆದರೆ ಜನರು ನನ್ನ ಮೌನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದಕ್ಕಾಗಿಯೇ ನಾನು ಇಂದು ಸತ್ಯ ಹೊರಹಾಕುತ್ತಿದ್ದೇನೆ” ಎಂದರು.

ರಜನಿಕಾಂತ್ ಅವರ ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. 

Exit mobile version