ರಜನೀಕಾಂತ್ ಮತ್ತು ಅವ್ರ ಡೈ ಹಾರ್ಡ್ ಫ್ಯಾನ್ಸ್‌ಗೆ ಡಬಲ್ ಧಮಾಕ. ಒಂದ್ಕಡೆ ಕೂಲಿ ಬಾಕ್ಸ್ ಆಫೀಸ್‌ನಲ್ಲಿ ತಾಂಡವ ಆಡ್ತಿದ್ರೆ, ಮತ್ತೊಂದ್ಕಡೆ ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷ ಕಂಪ್ಲೀಟ್ ಮಾಡಿರೋ ಸಂಭ್ರಮ. ಇಳಿವಯಸ್ಸಿನಲ್ಲೂ ರಜನಿ ಪವರ್ ಹೌಸ್ ರೀತಿ ಲವಲವಿಕೆಯಿಂದ ಇರೋ ಖದರ್‌ಫುಲ್ ಸ್ಟೋರಿ ಇಲ್ಲಿದೆ.
- ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ
- ಒಂದೇ ದಿನದಲ್ಲಿ ವರ್ಲ್ಡ್‌ವೈಡ್ 151Cr ಪೈಸಾ ವಸೂಲ್
- ಆರ್ಭಟಿಸಿದ ನಮ್ಮ ಉಪೇಂದ್ರ.. ಬೀಡಿ ಸೀನ್ ಸೂಪರ್
- ರಚಿತಾ ರಾಮ್ ವಿಲನ್ ಖದರ್.. ಕಿಲ್ಲರ್ ಪರ್ಫಾಮೆನ್ಸ್
ರಜನೀಕಾಂತ್ ವಯಸ್ಸು 74.. ಅವರ ಸಿನಿಮಾಗಳ ಸಂಖ್ಯೆ ಬರೋಬ್ಬರಿ 171. ಡಬಲ್ ಸೆಂಚುರಿಯತ್ತ ಸಾಗ್ತಿರೋ ಸೂಪರ್ ಸ್ಟಾರ್ ರಜನೀಕಾಂತ್ ವೃತ್ತಿ ಬದುಕಿಗೆ 50 ವರ್ಷ. ಇದು ನಿಜಕ್ಕೂ ಗ್ರೇಟ್. ಒಬ್ಬ ಕಲಾವಿದ ನಿರಂತರವಾಗಿ 50 ವರ್ಷಗಳ ಕಾಲ ಕಲಾಸೇವೆ ಮಾಡಿದ್ದಾರೆ ಅನ್ನೋದು ತಮಾಷೆಯ ಮಾತಲ್ಲ. ತಲೈವಾ ರಜನಿ ಬರೀ ಸೂಪರ್ ಸ್ಟಾರ್ ಅಲ್ಲ. ಸಿನಿಸಂತ.
ರಜನಿಯಂತಹ ಅಪರೂಪದ, ಅಭಿಜ್ಞ ಕಲಾವಿದ ನಮ್ಮ ಭಾರತೀಯ ಚಿತ್ರರಂಗದಲ್ಲಿರೋದೇ ನಮ್ಮ ಸೌಭಾಗ್ಯ. ಅದ್ರಲ್ಲೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಸಾಮಾನ್ಯ ಬಸ್ ಕಂಡಕ್ಟರ್‌ನಿಂದ ಅಂತಾರಾಷ್ಟ್ರೀಯ ಮಟ್ಟದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯೇ ಇಂಟರೆಸ್ಟಿಂಗ್. ಅದಕ್ಕಾಗಿ ಅವ್ರ ಶ್ರಮ, ತಪಸ್ಸು ದೊಡ್ಡದಿದೆ. ಹಿಮಾಲಯಕ್ಕೆ ಹೋಗಿ ಅಲ್ಲಿನ ಬಾಬಾಗಳನ್ನ ಭೇಟಿ ಮಾಡಿ ಬರುವ ತಲೈವಾ, ಅಲ್ಲಿ ಯೋಗ, ತಪಸ್ಸು ಮಾಡ್ತಾ, ಗಿಡಮೂಲಿಕೆಗಳ ಬೇರುಗಳ ರಸ ಕೂಡ ಕುಡಿದು ಬರ್ತಾರೆ. ಅದೇ ಅವ್ರ ಸಕ್ಸಸ್ ಸೀಕ್ರೆಟ್ ಕೂಡ ಹೌದು.
ಸರಳ, ಸಜ್ಜನಿಕೆಯ ಈ ಮೇರುನಟ ಭಾರತೀಯ ಚಿತ್ರರಂಗದಲ್ಲಿ ಯಶಸ್ವೀ 50 ವರ್ಷ ಪೂರೈಸಿರೋದು ನಿಜಕ್ಕೂ ಮೈಲಿಗಲ್ಲು. ಈ ಸಂಭ್ರಮದ ಜೊತೆ ಅವರ ಇತ್ತೀಚಿನ ರಿಲೀಸ್ ಕೂಲಿ ಸಿನಿಮಾ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸ್ತಿದೆ. ಸಿನಿಮಾ ತೆರೆಕಂಡ ಮೊದಲ ದಿನವೇ ಬರೋಬ್ಬರಿ 151 ಕೋಟಿ ಪೈಸಾ ವಸೂಲ್ ಮಾಡಿದೆ. ಎರಡನೇ ದಿನ ಕೂಡ 100 ಕೋಟಿ ಗಳಿಸಿದ್ದು, ಎರಡೇ ದಿನಕ್ಕೆ 250 ಕೋಟಿ ಕ್ಲಬ್ ಸೇರಿದೆ ಎನ್ನಲಾಗಿದೆ. ಇದಲ್ಲವೇ ತಲೈವಾ ಕ್ರೇಜ್, ಮೇನಿಯಾ..?
ಅಂದಹಾಗೆ ಫಿಲ್ಮ್ ಮೇಕಿಂಗ್‌ನಲ್ಲಿ ಒನ್ ಆಫ್ ದಿ ಮಾಸ್ಟರ್‌ಮೈಂಡ್ ಅನಿಸಿಕೊಂಡಿರೋ ಸಕ್ಸಸ್‌ಫುಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಕೂಲಿ. ಅವ್ರ ಕಥೆ, ಪಾತ್ರಗಳು, ಮೇಕಿಂಗ್ ಎಲ್ಲವೂ ಅದ್ಭುತವಾಗಿದ್ದು, ಮೆಗಾ ಮಲ್ಟಿಸ್ಟಾರರ್‌ನಲ್ಲಿ ರಜನೀಕಾಂತ್ ಜೊತೆ ನಾಗಾರ್ಜುನ್, ನಮ್ಮ ಉಪೇಂದ್ರ, ಸೌಬಿನ್, ರಚಿತಾ ರಾಮ್, ಆಮೀರ್ ಖಾನ್, ಶ್ರುತಿ ಹಾಸನ್ ಹೀಗೆ ಎಲ್ಲರನ್ನೂ ಅಲ್ಟಿಮೇಟ್ ಆಗಿ ತೋರಿಸಿದ್ದಾರೆ.
ತಲೈವಾ ಉಪ್ಪಿ ಖದರ್ ಜೋರಿದ್ದು, ಸೂಪರ್ ಸ್ಟಾರ್-ರಿಯಲ್ ಸ್ಟಾರ್ ಕಾಂಬೋ ನಿಜಕ್ಕೂ ಮಸ್ತ್ ಮ್ಯಾಜಿಕ್ ಮಾಡ್ತಿದೆ. ಅದ್ರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಆಮೀರ್-ರಜನಿ-ಉಪ್ಪಿ ಬೀಡಿ ಸೀನ್ ನೋಡುಗರಿಗೆ ಕಿಕ್ ಕೊಡಲಿದೆ. ಇನ್ನು ರಚಿತಾ ರಾಮ್ ಪಾತ್ರ ನಿಜಕ್ಕೂ ನೋಡುಗರಿಗೆ ಬಿಗ್ ಸರ್‌ಪ್ರೈಸ್. ರಚಿತಾ ಪಾತ್ರವನ್ನು ಗೌಪ್ಯವಾಗಿಟ್ಟಿದ್ರು ಡೈರೆಕ್ಟರ್. ಕಿಲ್ಲರ್ ಕಲ್ಯಾಣಿ ರೋಲ್‌ನಿಂದ ಕಿಲ್ಲರ್ ಪರ್ಫಾಮೆನ್ಸ್ ನೀಡಿರೋ ರಚ್ಚು, ಎಲ್ಲರ ಹುಬ್ಬೇರಿಸಿದ್ದಾರೆ. ಈ ಚಿತ್ರದ ಮೂಲಕ ರಚಿತಾ ಖಡಕ್ ಖಳನಾಯಕಿಯಾಗಿ ಕೂಡ ತಮ್ಮ ನಟನಾ ಗತ್ತು ತೋರಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್