ಬೆಂಗಳೂರು: ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ತಮ್ಮ ದೀರ್ಘಕಾಲೀನ ಸಹಗಾಯಕಿ ವಾರ್ಜಶ್ರೀ ಅವರನ್ನು ವಿವಾಹವಾಗಲಿದ್ದಾರೆ. ಈ ವಿವಾಹ ಸಮಾರಂಭ ಈ ಅಕ್ಟೋಬರ್ ತಿಂಗಳಲ್ಲೇ ನೆಡೆಯುವ ನಿರೀಕ್ಷೆ ಇದೆ. ಇಬ್ಬರೂ ದೀರ್ಘಕಾಲದ ಗೆಳೆಯರಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದಾರೆ.
ರಘು ದೀಕ್ಷಿತ್ ಅವರು ಈ ಹೊಸ ಆರಂಭದ ಬಗ್ಗೆ ಮಾತನಾಡುತ್ತಾ, ಸತ್ಯ ಹೇಳಬೇಕಾದರೆ, ಇದು ಬರುವುದನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೆ. ಆದರೆ ಜೀವನ ಬೇರೆಯದೇ ಯೋಜನೆ ಹೊಂದಿತ್ತು ಎಂದು ಮದುವೆ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಹಾಗೂ ವಾರ್ಜಶ್ರೀ ಬಗ್ಗೆ ಮಾತನಾಡುತ್ತಾ, ನಮ್ಮಿಬ್ಬರ ಬಲವಾದ ಸ್ನೇಹ ಸ್ವಾಭಾವಿಕವಾಗಿ ಪ್ರೀತಿ ಮತ್ತು ಒಡನಾಟವಾಗಿ ಬದಲಾಯಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ವಾರ್ಜಶ್ರೀ ಮತ್ತು ಅವರ ಪೋಷಕರ ಆಶೀರ್ವಾದದೊಂದಿಗೆ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಘು ದೀಕ್ಷಿತ್ ಮತ್ತು ವಾರ್ಜಶ್ರೀ ಅವರು ಸಂಗೀತ ಕ್ಷೇತ್ರದಲ್ಲಿ ಬಹುಕಾಲದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ‘ಟಗರು’, ‘ಡಾರ್ಲಿಂಗ್’, ‘ಆಚಾರ್ ಅಂಡ್ ಕೋ’ ಸೇರಿದಂತೆ ಹಲವು ಚಲನಚಿತ್ರಗಳಿಗೆ ಇಬ್ಬರೂ ಒಟ್ಟಿಗೆ ಹಾಡಿದ್ದಾರೆ. ವಿವಿಧ ಸಂಗೀತ ವೇದಿಕೆಗಳಲ್ಲಿ ಇಬ್ಬರೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ರಘು ದೀಕ್ಷಿತ್ ಅವರು ಈ ಹಿಂದೆ ಕೊರಿಯೋಗ್ರಾಫರ್ ಮತ್ತು ನರ್ತಕಿ ಮಯೂರಿ ಉಪಾಧ್ಯಾ ಅವರನ್ನು ವಿವಾಹವಾಗಿದ್ದರು. 2019ರಲ್ಲಿ ಇಬ್ಬರು ವಿಚ್ಛೇದನ ಪಡೆದು ಬೇರೆಯಾಗಿದ್ದರು. ಈಗ ರಘು ದೀಕ್ಷಿತ್ ಅವರು ತಮ್ಮ ಜೀವನಸಂಗಾತಿಯಾಗಿ ತಮ್ಮ ದೀರ್ಘಕಾಲದ ಸಹಕಾರಿ ಮತ್ತು ಗೆಳತಿ ವಾರ್ಜಶ್ರೀ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.