ಕನ್ನಡ ಭಾಷೆ ವಿವಾದ: ಕಮಲ್ ಹಾಸನ್‌ಗೆ ರಚಿತಾ ರಾಮ್ ತಿರುಗೇಟು!

ತಪ್ಪು ಮಾಡಿದ ಮೇಲೆ ಕ್ಷಮೆ ಕೇಳುವುದರಲ್ಲಿ ತಪ್ಪು ಏನಿದೆ..?

Befunky collage 2025 05 31t085704.620

ತಮಿಳು ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಕನ್ನಡ ಭಾಷೆಯ ಉಗಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.

ರಚಿತಾ ರಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಅವರು ಕನ್ನಡದ ಜನಪ್ರಿಯ ಗೀತೆಯ ಸಾಲು ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡದವನು ಆಗಿರು’ ಎಂದು ಹಾಡಿದ್ದಾರೆ. ಈ ಹಾಡಿನ ಮೂಲಕ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ಅವರು, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದ್ದಾರೆ.

ADVERTISEMENT
ADVERTISEMENT

“ಕನ್ನಡ ಮತ್ತು ಕರ್ನಾಟಕ ಎಂದು ಬಂದಾಗ ಪ್ರತಿಯೊಬ್ಬ ಕನ್ನಡಿಗನ ಭಾವನೆಗಳು ತುಂಬಾ ತೀವ್ರವಾಗಿರುತ್ತವೆ. ನಮ್ಮ ಭಾಷೆಯ ಬಗ್ಗೆ ಯಾರಾದರೂ ತಪ್ಪಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಕನ್ನಡಿಗರಾದ ನಾವು ಎಲ್ಲ ಭಾಷೆಯ ಸಿನಿಮಾಗಳನ್ನು ವೀಕ್ಷಿಸುತ್ತೇವೆ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆಯ ಬಗ್ಗೆ ಯಾರಾದರೂ ಅಗೌರವವಾಗಿ ಮಾತನಾಡಿದರೆ, ನಾವು ಧ್ವನಿಯೆತ್ತಬೇಕು,” ಎಂದು ರಚಿತಾ ರಾಮ್ ಹೇಳಿದ್ದಾರೆ.

ಅವರು ಮುಂದುವರಿದು, “ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ. ಚಿಕ್ಕವರು ತಪ್ಪು ಮಾಡಿದರೆ ಕ್ಷಮೆ ಕೇಳುವವರೆಗೂ ದೊಡ್ಡವರು ಬಿಡುವುದಿಲ್ಲ. ಆದರೆ ದೊಡ್ಡವರು ತಪ್ಪು ಮಾಡಿದರೆ, ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ? ಕನ್ನಡ ಭಾಷೆಯನ್ನು ಇತರರಿಗೆ ಕಲಿಸುವ ನಾವು, ತಪ್ಪಾಗಿ ಮಾತನಾಡುವವರಿಗೆ ಉತ್ತರ ನೀಡಬೇಕು. ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ಕ್ಕೆ ಆಚರಿಸುವಂತೆ, ಈಗಲೂ ನಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ತೋರಿಸೋಣ,” ಎಂದು ಕನ್ನಡಿಗರಿಗೆ ಮನವಿ ಮಾಡಿದ್ದಾರೆ.

ಕನ್ನಡಿಗರು ಎಲ್ಲ ಭಾಷೆಗಳಿಗೂ ಗೌರವ ಕೊಡುವವರು ಎಂದು ಒತ್ತಿ ಹೇಳಿರುವ ರಚಿತಾ, ಕನ್ನಡ ಭಾಷೆಯ ಬಗ್ಗೆ ಅಗೌರವದಿಂದ ಮಾತನಾಡುವವರಿಗೆ ತಕ್ಕ ರೀತಿಯಲ್ಲಿ ಉತ್ತರಿಸುವುದು ಕನ್ನಡಿಗರ ಕರ್ತವ್ಯ ಎಂದು ಹೇಳಿದ್ದಾರೆ.

Exit mobile version