ಯಶ್ ಪರ ‘ಪುಷ್ಪ’ ಬ್ಯಾಟಿಂಗ್..ಟಾಕ್ಸಿಕ್‌‌‌ ಬಗ್ಗೆ ಹೇಳಿದ್ದೇನು..?

ಟೀಸರ್ ಅಷ್ಟೇ.. ಸಿನಿಮಾ ಅಲ್ಲ.. ಯಶ್ ಮೇಲೆ ನಂಬಿಕೆ ಇಡಿ

Untitled design 2026 05 25T154302.125

ಕೊತ್ತಲವಾಡಿ ಸಿನಿಮಾ ಬಳಿಕ ಫಿಲ್ಮ್ ಡಿಸ್ಟ್ರಿಬ್ಯೂಷನ್‌ಗೂ ಕೈ ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಎಲ್ಲರ ಗಮನ ಸೆಳೆದಿದ್ದರು. ಇದೀಗ ಚಂದನವನ ಅಂದು ಇಂದು ಮುಂದು ಅನ್ನೋ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಚಿತ್ರರಂಗದ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಟಾಕ್ಸಿಕ್ ಚಿತ್ರದ ಟೀಸರ್‌ನ ಅಶ್ಲೀಲ ದೃಶ್ಯಗಳ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ಅದೇನು ಅಂತೀರಾ ಈ ಸ್ಟೋರಿ ನೋಡಿ…

ಚಂದನವನ ಅಂದು ಇಂದು ಮುಂದು.. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರು ಇಡೀ ಚಿತ್ರರಂಗವನ್ನ ಒಗ್ಗೂಡಿಸಿಕೊಂಡು, ಸಿಒಎಂ ಮಾಧ್ಯಮ ಸಲಹೆಗಾರರನ್ನೂ ಒಳಗೊಂಡಂತೆ ನಡೆಸಿದ ಚಿಂತನ ಮಂಥನ ಕಾರ್ಯಕ್ರಮ. ಕಲಾವಿದರ ಸಂಘದಲ್ಲಿ ನಡೆದ ಈ ಕಾರ್ಯಕ್ರಮವನ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದು ಇಂಟರೆಸ್ಟಿಂಗ್. ಇದರಲ್ಲಿ ಚಿತ್ರರಂಗದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರುಗಳು ಭಾಗಿಯಾಗಿ ಮುಕ್ತವಾಗಿ ಸಮಸ್ಯೆಗಳನ್ನ ಚರ್ಚಿಸಿದರು.

ಈ ಚಿತ್ರರಂಗದ ಕಾರ್ಯಕ್ರಮದಲ್ಲಿ ಉದಯೋನ್ಮುಖ ನಿರ್ಮಾಪಕಿ ಕಮ್ ವಿತರಕಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಕೂಡ ಭಾಗಿಯಾಗಿದ್ದರು. ಇಂಟರೆಸ್ಟಿಂಗ್ ಅಂದ್ರೆ ಚಿತ್ರರಂಗದ ಸಾಕಷ್ಟು ವಿಷಯಗಳ ಬಗ್ಗೆ ಅವರು ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಆ ಪೈಕಿ ತಮ್ಮ ಮಗ ಯಶ್ ಅವರ ಟಾಕ್ಸಿಕ್ ಚಿತ್ರ ತಡವಾಗ್ತಿರೋದು, ಅದರಲ್ಲಿರೋ ಹಾಟ್ & ಬೋಲ್ಡ್ ಕಂಟೆಂಟ್ ಬಗ್ಗೆ ಮುಕ್ತವಾಗಿ ತಮ್ಮ ನಿಲುವನ್ನ ಹಂಚಿಕೊಂಡಿದ್ದು.

ಯೆಸ್.. ರಾಕಿಭಾಯ್ ಯಶ್ ಪರ ಬ್ಯಾಟ್ ಬೀಸಿರೋ ಕೊತ್ತಲವಾಡಿ ನಿರ್ಮಾಪಕಿ ಪುಷ್ಪ, ನೇರಾ ನೇರ ಮಾತನಾಡೋ ಮೂಲಕ ಮತ್ತೆ ಹೆಡ್‌‌ಲೈನ್ಸ್‌‌‌ ಮೂಲಕ ನ್ಯೂಸ್ ಆಗಿದ್ದಾರೆ. ಇತ್ತೀಚೆಗೆ ಇಡೀ ಕುಟುಂಬ ಕೂತು ಸಿನಿಮಾ ನೋಡೋಕೆ ಆಗಲ್ಲ. ಅಂತಹ ಕಂಟೆಂಟ್ ಸಿನಿಮಾಗಳು ಬರ್ತಿವೆ ಎಂದ ವರದಿಗಾರರ ಪ್ರಶ್ನೆಗೆ, ನಮ್ಮ ಕೊತ್ತಲವಾಡಿ ನೋಡಿ.. ಸಂಸಾರಿಕವಾಗಿದೆ.. ನೀವು ನೋಡಿಲ್ಲ. ಯಾಕಂದ್ರೆ ಥಿಯೇಟರ್ ಕೊಡಲಿಲ್ಲ. ಕೆಲವು ಸಮಸ್ಯೆಗಳಿವೆ ಅಂತ ಓಪನ್ ಆಗಿಯೇ ಗತಿಸಿದ ಆ ಘಟನೆಯನ್ನ ನೆನೆದಿದ್ದಾರೆ.

ಇತ್ತೀಚೆಗೆ ಬಂದ ಕೆಲ ಟೀಸರ್‌‌ಗಳಿಗೆ ತುಂಬಾ ವಿರೋಧ ವ್ಯಕ್ತವಾಗಿತ್ತು ಎಂದ ವರದಿಗಾರನ ಮಾತಿಗೆ, ಯಶ್ ತಾಯಿ ಪುಷ್ಪ ಮಾತನಾಡುತ್ತಾ.. ಎಲ್ಲಾ ಸಿನಿಮಾ ಹಾಗೆಯೇ ಇದೆ ಅನ್ನೋದು ತಪ್ಪು. ಟೇಸ್ಟ್‌ಗೆ ತಕ್ಕನಾಗಿ ಕೊಡಬೇಕಾಗುತ್ತೆ. ಎಲ್ಲರೂ ಮುದ್ದೆ, ರೊಟ್ಟಿಯನ್ನೇ ತಿನ್ನಲ್ಲ. ಬದಲಾವಣೆ ಬೇಕಾಗುತ್ತೆ ಎಂದಿದ್ದಾರೆ.

ಅಶ್ಲೀಲತೆಯನ್ನೇ ತುಂಬಿ ಬಿಟ್ರೆ ಹೇಗೆ ಎಂದ ಟಾಕ್ಸಿಕ್ ಕುರಿತ ಸ್ಟ್ರೈಟ್ ಹಿಟ್ ಪ್ರಶ್ನೆಗೆ ಪ್ರತಿಕ್ರಿಯಿಸಿರೋ ಅವರು, ಟಾಕ್ಸಿಕ್ ಇನ್ನೂ ಥಿಯೇಟರ್‌ಗೆ ಬಂದಿಲ್ಲ. ನಿಮಗೆ ಟೀಸರ್‌ನಲ್ಲಿ ಬಿಟ್ಟ ತಕ್ಷಣ ಅದು ಸಿನಿಮಾ ಆಗಲ್ಲ. ಅಟ್ರ್ಯಾಕ್ಷನ್‌ಗೆ ಹಾಗೆ ಬಿಟ್ಟಿರ್ತಾರೆ. ಈಗ ನೀವು ಪ್ಯಾಂಟ್ ಶರ್ಟ್ ಹಾಕ್ಕೋತೀರಾ. ಬೇರೆಯವರು ಬೇರೆ ಹಾಕ್ಕೋತಾರೆ. ಎಲ್ಲರಿಗೂ ಎಲ್ಲವೂ ಕೊಡಬೇಕು ಅಲ್ವಾ ರೀ..? ನೀವು ತಿನ್ನೋದನ್ನ ನಾನು ತಿನ್ನಲ್ಲ. ಈಗಿನ ಟ್ರೆಂಡ್‌ಗೆ ತಕ್ಕನಾಗಿ ಮಾಡಿದ್ದಾರೆ. ಯಶ್‌ಅವರ ಯಾವ ಪಿಚ್ಚರ್‌‌ನಲ್ಲಿ ಅಶ್ಲೀಲತೆ ಇದೆ..? ಇಲ್ಲಿಯ ತನಕ ಎಲ್ಲಾದ್ರೂ ತೋರಿಸಿದ್ದಾರಾ..? ಎಂದಿದ್ದಾರೆ.

ನೀವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವಾಗ ಎದ್ದು ಬರುವಂತಹ ಸಿನಿಮಾ ಮಾಡಿದ್ದಾರಾ ಯಶ್..? ಇಲ್ವಲ್ಲಾ..? ಟೀಸರ್ ಸಿನಿಮಾ ಅಲ್ಲ. ಮೊದಲು ಅದನ್ನ ಅರ್ಥ ಮಾಡಿಕೊಳ್ಳಿ. ಅದು ಜಸ್ಟ್ ಇನ್ವಿಟೇಷನ್ ಅಷ್ಟೇ. ಊಟ ಅಲ್ಲ. ನಿಮ್ಮ ಸಿನಿಮಾನ ಫಾರಿನ್ ಅವರು ನೋಡ್ತಾರಾ..? ಫಾರಿನ್ ಅವರಿಗೂ ಸಿನಿಮಾ ಮಾಡಬೇಕು ಅಂದಾಗ ಎಲ್ಲಾ ತರಹಾನೂ ಮಾಡಬೇಕಾಗುತ್ತೆ ಅಂತ ಇದು ಕನ್ನಡಿಗರಿಗಾಗಿ ಮಾಡಿರೋ ಚಿತ್ರವಲ್ಲ ಅನ್ನೋದನ್ನ ಪರೋಕ್ಷವಾಗಿ ಅರ್ಥೈಸಿದ್ದಾರೆ.

ನಾವು ಕನ್ನಡಿಗರು ದೊಡ್ಡ ಸಿನಿಮಾ ಮಾಡ್ತಿದ್ದೀವಿ ಅಂತ ಹೆಮ್ಮೆ ಪಡಬೇಕಾ..? ಅಥ್ವಾ ಲೇಟ್ ಆಗ್ತಿದೆ ಅಂತ ಬೇಜಾರು ಮಾಡ್ಕೋಬೇಕಾ..? ನೀವೇ ಹೇಳಿ ಅಂತ ಪ್ರಶ್ನಿಸೋ ಮೂಲಕ ಟಾಕ್ಸಿಕ್ ವಿಳಂಬದ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಯಾವಾಗ್ಲೂ ಚಿಕ್ಕ ಸಿನಿಮಾನೇ ಮಾಡೋದು. ಯಶ್ ಯಾವತ್ತೂ ಜನಕ್ಕೆ ಬೇಸರ ತರಿಸೋ ಸಿನಿಮಾ ಮಾಡಲ್ಲ. ಮಗ ಅಂತ ಈ ಮಾತನ್ನ ಹೇಳ್ತಿಲ್ಲ. ಅವನನ್ನ ನಾನು ಚಿಕ್ಕವನಿದ್ದಾಗಿನಿಂದಲೂ ನೋಡಿದ್ದೇನೆ. ಅವನು ಜನ ಹಾಗೂ ಅಭಿಮಾನಿಗಳಿಗಾಗಿಯೇ ಬದುಕಿರೋದು. ಅಪ್ಪ-ಅಮ್ಮನಿಗೂ ಮಾಡಲ್ಲ. ಅಕ್ಕ ಪಕ್ಕದವರಿಗೂ ಸಿನಿಮಾ ಮಾಡಲ್ಲ. ಯಶ್ ಮೇಲೆ ನಂಬಿಕೆ ಇರಲಿ. ನಿರ್ಮಾಪಕರ ಬಳಿ ದುಡ್ಡು ಹಾಕಿಸಬೇಕು ಅಂದ್ರೆ ಬಹಳಷ್ಟು ಯೋಚನೆ ಮಾಡಿ ಹಾಕಿಸ್ತಾನೆ. ಒಂದು ನಂಬಿಕೆ ಇಡಿ ಎಂದಿದ್ದಾರೆ ಮದರ್ ಇಂಡಿಯಾ ಪುಷ್ಪ.

ಒಟ್ಟಾರೆ ಯಶ್ ಅವರನ್ನ ಎಲ್ಲಿಯೂ ಬಿಟ್ಟು ಕೊಡದ ಪುಷ್ಪ ಅವರು, ಟಾಕ್ಸಿಕ್ ಸಿನಿಮಾದ ಕೆಲ ಹಿಡನ್ ಸೀಕ್ರೆಟ್ಸ್‌‌ನ ಹೇಳಿರೋದು ವಿಶೇಷ. ಇನ್ನೂ ರಿಲೀಸ್ ಡೇಟ್ ಫಿಕ್ಸ್ ಆಗದ ಟಾಕ್ಸಿಕ್ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚಾಗ್ತಿದ್ದು, ಮುಂದೆ ಏನೆಲ್ಲಾ ಅಪ್ಡೇಟ್ಸ್ ಸಿಗುತ್ತೆ ಅಂತ ಕಾದು ನೋಡೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version