ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಹಾಗೂ ‘ವೆನಿಲ್ಲಾ ಎಂಟರ್ಟೇನ್ಮೆಂಟ್’ ಸಂಸ್ಥೆ ನಿರ್ಮಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿ ಮುನ್ನುಗ್ಗುತ್ತಿದೆ. ಪ್ರೇಕ್ಷಕರ ಜತೆಗೆ ಚಿತ್ರರಂಗದ ಗಣ್ಯರೂ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಇದೀಗ ʻರಿಯಲ್ ಸ್ಟಾರ್ʼ ಉಪೇಂದ್ರ ಅವರು ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ವಿಶೇಷ ಸಂದೇಶ ಕಳುಹಿಸಿ ಮನಸಾರೆ ಹಾರೈಸಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ನಿರ್ದೇಶಕರ ಪರಿಶ್ರಮಕ್ಕೆ ಮಾರುಹೋಗಿರುವ ಉಪೇಂದ್ರ, ಸಿನಿಮಾ ನೋಡಿದ ಬೆನ್ನಲ್ಲೇ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಇಡೀ ತಂಡಕ್ಕೆ ಬೆನ್ನುತಟ್ಟಿದ್ದಾರೆ.
ಚಿತ್ರ ವೀಕ್ಷಿಸಿದ ಬಳಿಕ ನಿರ್ದೇಶಕರೊಂದಿಗೆ ಮಾತನಾಡಲು ಉತ್ಸುಕರಾಗಿರುವ ಉಪೇಂದ್ರ, “ನಮಸ್ಕಾರ, ನಾನು ಉಪೇಂದ್ರ ಮಾತನಾಡುತ್ತಿರುವುದು. ನಿಮ್ಮ ಸಿನಿಮಾ ‘ಪ್ರೇಮದ ಊರಲಿ’ ನೋಡಿದೆ, ನಿಜಕ್ಕೂ ಅದ್ಭುತವಾಗಿದೆ! ನಿಮ್ಮ ಜೊತೆ ಎಷ್ಟು ಮಾತನಾಡಬೇಕು ಎನಿಸುತ್ತಿದೆ ಎಂದರೆ, ನಿಮಗೆ ಯಾವಾಗಲಾದರೂ ಬಿಡುವಿದ್ದಾಗ ಖುದ್ದಾಗಿ ಭೇಟಿಯಾಗಿ ವೈಯಕ್ತಿಕವಾಗಿ ಮಾತನಾಡಬೇಕು. ಈ ಸಿನಿಮಾದ ಯಶಸ್ಸಿನಿಂದ ನೀವು ಈಗ ತುಂಬಾ ಬಿಡುವಿಲ್ಲದೆ ಇರುತ್ತೀರಿ ಎಂದು ಗೊತ್ತು. ಪರವಾಗಿಲ್ಲ, ನಿಮಗೆ ಸಮಯ ಸಿಕ್ಕಾಗ ಈ ನಂಬರ್ಗೆ ಕರೆ ಮಾಡಿ. ನಿಮ್ಮನ್ನು ನೇರವಾಗಿ ಭೇಟಿಯಾಗಿ, ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಆಸೆಯಿದೆ” ಎಂದು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.
ಚಿತ್ರದ ತಾಂತ್ರಿಕ ಶ್ರೀಮಂತಿಕೆ ಹಾಗೂ ಕಥೆಯ ಓಘವನ್ನು ಕೊಂಡಾಡಿದ ಅವರು, “ಚಿತ್ರದಲ್ಲಿನ ಪ್ರತಿಯೊಂದು ಪಾತ್ರಗಳು, ಚಿತ್ರಕಥೆ, ಒಂದೊಂದು ಸಂಭಾಷಣೆ ಹಾಗೂ ಸಂಗೀತ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಲ್ಲಿಯೂ ಯಾವುದೇ ಲೋಪದೋಷವೇ ಕಾಣದ ಅದ್ಭುತ ಸಿನಿಮಾ ಇದಾಗಿದೆ. ಕನ್ನಡ ಚಿತ್ರರಂಗಕ್ಕೆ ಇಂತಹದೊಂದು ಸುಂದರ, ಕಾವ್ಯಾತ್ಮಕ ಹಾಗೂ ಅಸಾಧಾರಣ ಕೃತಿ ನೀಡಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಶ್ಲಾಘಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳ ಬರಗಾಲವಿದೆ ಎನ್ನುವ ಕಾಲಘಟ್ಟದಲ್ಲಿ ಈ ಚಿತ್ರ ಮೂಡಿಬಂದಿರುವುದನ್ನು ಉಲ್ಲೇಖಿಸಿದ ರಿಯಲ್ ಸ್ಟಾರ್, “ನನಗೆ ಈ ಸಿನಿಮಾ ನೋಡಿದಾಗ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು. ಈ ಚಿತ್ರಕಥೆ ಮತ್ತು ನಿಮ್ಮ ನಿರ್ದೇಶನದ ಶೈಲಿ ನೋಡಿದರೆ ನಿಮಗೆ ಚಿತ್ರರಂಗದಲ್ಲಿ ಅತ್ಯಂತ ಉಜ್ವಲ ಭವಿಷ್ಯವಿದೆ ಹಾಗೂ ನೀವು ದೊಡ್ಡ ನಿರ್ದೇಶಕರಾಗುತ್ತೀರಿ ಎಂಬ ವಿಶ್ವಾಸ ನನಗಿದೆ. ನಮ್ಮ ಶುಭಹಾರೈಕೆ ಸದಾ ನಿಮ್ಮ ಜೊತೆಗಿರುತ್ತದೆ” ಎಂದು ಹೇಳುವ ಮೂಲಕ ನಿರ್ದೇಶಕ ಮನೋಜ್ ಕುಮಾರ್ ಅವರ ಬೆನ್ನುತಟ್ಟಿ ಶುಭ ಕೋರಿದ್ದಾರೆ. ಸದ್ಯ ಉಪೇಂದ್ರ ಅವರ ಈ ಮಾತುಗಳು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
