ಅಪ್ಪು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಬರೋಬ್ಬರಿ 5 ವರ್ಷ. ಕಾಲ ಉರುಳಿದ್ರೂ, ಯುಗಗಳೇ ಸಾಗಿದ್ರೂ ಆ ನಗು, ಆ ಕರುಣೆ, ಆ ಸರಳತೆ ಮಾತ್ರ ಕನ್ನಡಿಗರ ಎದೆಯಿಂದ ಎಳ್ಳಷ್ಟೂ ಮಾಸಿಲ್ಲ. ಇಂದು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ. ಬೆಳ್ಳಂಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡಮನೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ರೆ, ರಾಜ್ಯದ ಮೂಲೆ ಮೂಲೆಯಿಂದ ಹರಿದುಬಂದ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ರಾಜರತ್ನನ ಸಮಾಧಿಗೆ ಕೆಂಪು ಗುಲಾಬಿಗಳನ್ನಿಟ್ಟು ಕಣ್ಣೀರಿನ ನಮನ ಸಲ್ಲಿಸಿದ್ದಾರೆ.
ನಗುಮುಖದ ಒಡೆಯ ಅಗಲಿ 5 ವರ್ಷ.. ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ
ಕಂಠೀರವದಲ್ಲಿ ಭಾವುಕ ಕ್ಷಣ, ದೊಡ್ಡಮನೆ ಕುಟುಂಬಸ್ಥರಿಂದ ನಮನ..!
ಅಪ್ಪು ನಮ್ಮ ಜೊತೆಯೇ ಇದ್ದಾರೆ ಗದ್ಗದಿತ ಕಂಠದಲ್ಲಿ ಅಭಿಮಾನಿಗಳ ಗರ್ಜನೆ
ನೇತ್ರದಾನ, ರಕ್ತದಾನ ಸಮಾಜಮುಖಿ ಕಾರ್ಯಗಳಲ್ಲಿ ಜೀವಂತ ‘ಪವರ್ ಸ್ಟಾರ್’..!
‘ಕಾಲಾಯ ತಸ್ಮೈ ನಮಃ’ ಅನ್ನೋ ಮಾತು ಸತ್ಯವಿರಬಹುದು, ಆದರೆ ಬೆಳ್ಳಿಪರದೆಯ ಯುವರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ವಿಷಯದಲ್ಲಿ ಕಾಲವೇ ಸೋತು ನಿಂತಿದೆ. ಅಪ್ಪು ಭೌತಿಕವಾಗಿ ನಮ್ಮನ್ನು ಅಗಲಿ ಬರೋಬ್ಬರಿ 5 ವರ್ಷಗಳೇ ಕಳೆದುಹೋಗಿವೆ. 5 ವರ್ಷಗಳ ಹಿಂದೆ ಆ ಕಪ್ಪು ಶುಕ್ರವಾರ ಕನ್ನಡಿಗರ ಎದೆಗೆ ಬಡಿದ ಸಿಡಿಲು ಇಂದಿಗೂ ಹಸಿಯಾಗಿಯೇ ಇದೆ. ಕನ್ನಡಿಗರ ನೆಚ್ಚಿನ ಮನೆಮಗ ದೂರವಾದ್ರೂ, ಪ್ರತಿಯೊಬ್ಬ ಅಭಿಮಾನಿಯ ಉಸಿರಲ್ಲೂ ಅಪ್ಪುವಿನ ನೆನಪಿನ ದೀಪ ಹಾಗೇ ಮಿನುಗುತ್ತಿದೆ.
ಇಂದು ಅಪ್ಪು ಅವರ 5ನೇ ವರ್ಷದ ನಮನದ ಹಿನ್ನೆಲೆಯಲ್ಲಿ, ಬೆಳ್ಳಂಬೆಳಿಗ್ಗೆ ಕಂಠೀರವ ಸ್ಟುಡಿಯೋ ಕಣ್ಣೀರಿನ ಮಡುವಿನಲ್ಲಿ ಮುಳುಗಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್, ಹಿರಿಯ ಮಗಳು ದೃತಿ, ಯುವ ರಾಜ್ಕುಮಾರ್, ಹಾಗೂ ರಾಘವೇಂದ್ರ ರಾಜ್ಕುಮಾರ್ ಪತ್ನಿ ಮಂಗಳ ಸೇರಿದಂತೆ ಇಡೀ ದೊಡ್ಡಮನೆ ಕುಟುಂಬವೇ ಸ್ಮಾರಕದ ಬಳಿ ನೆರೆದಿತ್ತು. ಅಪ್ಪುವಿನ ನೆನಪಲ್ಲಿ ಸಮಾಧಿಗೆ ಧೂಪ-ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆ, ಕುಟುಂಬಸ್ಥರ ಕಣ್ಣಂಚಲ್ಲಿ ಹರಿದ ಕಣ್ಣೀರು ಅಲ್ಲಿದ್ದ ಎಲ್ಲರ ಹೃದಯವನ್ನೂ ಹಿಂಡುವಂತಿತ್ತು.
ಕುಟುಂಬಸ್ಥರು ಪೂಜೆ ಮುಗಿಸಿ ತೆರಳುತ್ತಿದ್ದಂತೆ, ಕಂಠೀರವ ಸ್ಟುಡಿಯೋದತ್ತ ಅಭಿಮಾನಿಗಳ ಸಾಗರವೇ ಹರಿದುಬಂತು. 5 ವರ್ಷಗಳೇ ಉರುಳಿದರೂ ಅಪ್ಪುವಿನ ಮೇಲಿರೋ ಆ ಅಸಲಿ ಕ್ರೇಜ್ ಹಾಗೂ ಪ್ರೀತಿ ಎಳ್ಳಷ್ಟೂ ತಗ್ಗಿಲ್ಲ. ನೆಚ್ಚಿನ ರ್ಯಾಂಬೋ ನಟನನ್ನು ಕೊನೆಯದಾಗಿ ಮನದಲ್ಲೇ ಕಣ್ಣುತುಂಬಿಕೊಳ್ಳಲು ಬಂದ ಕೋಟ್ಯಂತರ ಅಭಿಮಾನಿಗಳು, ಸಮಾಧಿ ಮೇಲೆ ರಕ್ತವರ್ಣದ ಕೆಂಪು ಗುಲಾಬಿಗಳನ್ನಿಟ್ಟು ಜೈಕಾರ ಕೂಗುತ್ತಾ ಭಾವಪೂರ್ಣ ನಮನ ಸಲ್ಲಿಸಿದರು.
ಅಪ್ಪು ಅಂದ್ರೆ ಬರೀ ನಟನೆಯ ಮ್ಯಾಜಿಕ್ ಅಷ್ಟೇ ಅಲ್ಲ, ಅವರೊಬ್ಬ ಕರುಣೆಯ ಸಾಗರ. ತಾವು ಬದುಕಿದ್ದಾಗ ಮಾಡಿದ ರಹಸ್ಯ ದಾನಧರ್ಮಗಳನ್ನು ಇಂದು ಅವರ ಅಭಿಮಾನಿಗಳು ಪರಂಪರೆಯಂತೆ ಮುಂದುವರಿಸುತ್ತಿದ್ದಾರೆ. 5ನೇ ವರ್ಷದ ಪುಣ್ಯತಿಥಿಯ ನೆಪದಲ್ಲಿ ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರಗಳು, ಉಚಿತ ಕಣ್ಣಿನ ತಪಾಸಣೆ, ನೇತ್ರದಾನ ನೋಂದಣಿ ಹಾಗೂ ಬಡವರಿಗೆ ಅನ್ನದಾನ ಆಯೋಜಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ರಾಜರತ್ನನ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





