ಪ್ರೇಕ್ಷಕರ ಕಣ್ಣಲ್ಲಿ ಭಾವುಕ ಮಳೆ.. ನೋಡುಗರ ಹೃದಯದಲ್ಲಿ ಒಲವಿನ ಮಳೆ.. ಬರಗಾಲದಂತೆ ಬಳಲಿ ಬೆಂಡಾಗಿದ್ದ ಸ್ಯಾಂಡಲ್‌ವುಡ್‌ಗೆ ಅಕ್ಷರಶಃ ಮುಂಗಾರು ಮಳೆ. ಯೆಸ್.. ಇದಕ್ಕೆಲ್ಲಾ ಕಾರಣ ಪ್ರೇಮದ ಊರಲಿ. ಕನ್ನಡಿಗರ ಜೊತೆ ಪರಭಾಷಿಗರು, ವಿದೇಶಿಗರು ಕೂಡ ಈ ಸಿನಿಮಾನ ತಲೆಮೇಲೆ ಹೊತ್ತು ಮೆರೆಸುತ್ತಿದ್ದು, ಬಾಕ್ಸ್ ಆಫೀಸ್ ತೂಫಾನ್ ಆಗಿ ರಾರಾಜಿಸ್ತಿದೆ. ಯಶಸ್ವೀ 50 ಕೋಟಿ ಕ್ಲಬ್ ಸೇರಿರೋ ಪ್ರೇಮದ ಊರಲಿ ರಿಯಲ್ ಮ್ಯಾಜಿಕ್ ನೋಡಿದ್ರೆ ನೀವು ಹುಬ್ಬೇರಿಸೋದು ಗ್ಯಾರಂಟಿ.
- 24Hrs.. 2.6 ಲಕ್ಷ ಟಿಕೆಟ್ಸ್.. 50Cr ಕ್ಲಬ್ಗೆ ಪ್ರೇಮದ ಊರಲಿ
- ಆಂಧ್ರದಲ್ಲಿ 50 ಶೋಗಳಿಂದ ಶುರು.. 1200 ಶೋ ಪ್ರದರ್ಶನ..!
- ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ದುಬೈನಲ್ಲೂ ಹೌಸ್‌ಫುಲ್..!
- ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ
ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳ ಸುಳಿಗೆ ಸಿಲುಕಿ ಒದ್ದಾಡ್ತಿರೋ ಈ ಕಾಲಘಟ್ಟದಲ್ಲಿ.. ಅಪ್ಪಟ ಕನ್ನಡ ಸಿನಿಮಾ ಮಾಡಿ.. ಆನ್ ಡಿಮ್ಯಾಂಡ್ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸದ್ದು ಗದ್ದಲ ಮಾಡ್ತಿರೋ ಸಿನಿಮಾ ಪ್ರೇಮದ ಊರಲಿ. ಯೆಸ್.. ಹಚ್ಚ ಹಸಿರಾಗಿರೋ ಹಳ್ಳಿ ಸೊಗಡು, ಸೊಬಗು, ಅಲ್ಲಿರೋ ತಂದೆ-ಮಗನ ಬಾಂಧವ್ಯ, ನವಿರಾದ ಪ್ರೇಮಕಥೆ, ಬದುಕು, ಬವಣೆ, ಖುಷಿ-ದುಃಖಗಳ ಹೂರಣವೇ ಈ ಪ್ರೇಮದ ಊರಲಿಗೆ ತೋರಣ. ಹಾಗಾಗಿಯೇ ಜನ ಈ ಸಿನಿಮಾನ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ.
ಅಕ್ಷಿ ಅನ್ನೋ ನ್ಯಾಷನಲ್ ಅವಾರ್ಡ್ ಮೂವಿ ಮಾಡಿದ್ದ ನಿರ್ದೇಶಕ ಮನೋಜ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಶ್ರೀರಾಮ್, ರಂಗಾಯಣ ರಘು, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ಕಾಣಸಿಗಲಿದ್ದಾರೆ. ಸಿನಿಮಾ ತೆರೆಕಂಡು 3 ವಾರಗಳಾದ್ರೂ ಇನ್ನೂ ನಿಂತಿಲ್ಲ ಅಬ್ಬರ, ಆರ್ಭಟ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಎರಡೂವರೆ ಕೋಟಿ ಸ್ಮಾಲ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇದೀಗ 50 ಕೋಟಿ ಕ್ಲಬ್ ಸೇರೋ ಮೂಲಕ ದಾಖಲೆ ಬರೆದಿದೆ.
ಯೆಸ್.. ನಿನ್ನೆ ಒಂದೇ ದಿನ ಬರೋಬ್ಬರಿ 2 ಲಕ್ಷ 60 ಸಾವಿರಕ್ಕಿಂತಲೂ ಅಧಿಕ ಟಿಕೆಟ್ಸ್ ಸೋಲ್ಡ್‌ಔಟ್ ಆಗಿವೆ. ಪ್ರತೀ ದಿನ ಕನಿಷ್ಟ ಒಂದು ಲಕ್ಷ ಟಿಕೆಟ್ಸ್ ಬುಕ್ ಮೈ ಶೋನಲ್ಲಿ ಬುಕ್ ಆಗ್ತಿದ್ದು, ನಿರ್ಮಾಪಕರ ಜೇಬಿಗೆ ಕೋಟಿ ಕೋಟಿ ಹಣ ಬಂದು ಬೀಳ್ತಿರೋದು ಖುಷಿಯ ವಿಚಾರ. ಪಕ್ಕದ ಆಂಧ್ರದಲ್ಲಿ ತೆಲುಗು ಅವರತಣಿಕೆ ಜೊತೆ ಕನ್ನಡ ವರ್ಷನ್ ಕೂಡ ಬಿಡುಗಡೆ ಆಗಿದ್ದು, ಈ ಎಮೋಷನಲ್ ಬ್ಲಾಕ್‌ಬಸ್ಟರ್ ಸಿನಿಮಾ ಮೊದಲಿಗೆ ಅಲ್ಲಿ 50 ಶೋಗಳಿಂದ ಆರಂಭವಾಗಿ, ಇದೀಗ 1200ಕ್ಕೂ ಅಧಿಕ ಶೋಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ಎಲ್ಲರ ಹುಬ್ಬೇರಿಸ್ತಿದೆ.
ತಮಿಳುನಾಡು, ನಾರ್ತ್ ಇಂಡಿಯಾ ಸೇರಿದಂತೆ ದೇಶದಾದ್ಯಂತ ಪ್ರೇಮದ ಊರಲಿ ಕನ್ನಡ ಸಿನಿಮಾನೇ ರಿಲೀಸ್ ಆಗಿ ಎಲ್ಲೆಡೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆದುಕೊಳ್ತಿದೆ. ಕರ್ನಾಟಕದ ಹೊರತಾಗಿ ಅಂದ್ರೆ ಪ್ಯಾನ್ ಇಂಡಿಯಾ ಹಾಗೂ ಓವರ್‌ಸೀಸ್ ರಿಲೀಸ್‌ನ ಕೆಆರ್‌ಜಿ ಸ್ಟುಡಿಯೋಸ್ ಮಾಡ್ತಿದ್ದು, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ದುಬೈ, ಕತಾರ್.. ಹೀಗೆ ವಿದೇಶಗಳಲ್ಲೂ ಪ್ರೇಮದ ಊರಲಿ ಸಿನಿಮಾನ ಮೆಚ್ಚಿಕೊಂಡು, ಮುಗಿ ಬಿದ್ದು ಚಿತ್ರಪ್ರೇಮಿಗಳು ನೋಡ್ತಿರೋದು ವಿಶೇಷ.
ಸುನಾದ್ ಗೌತಮ್ ಸಂಗೀತಾ & ಹಿನ್ನೆಲೆ ಸಂಗೀತ, ರಾಜ್‌ಕಾಂತ್ ಸಿನಿಮಾಟೋಗ್ರಫಿ ಪ್ರೇಮದ ಊರಲಿ ಸಿನಿಮಾದ ಅಂಚ ಚೆಂದ ಹೆಚ್ಚಿಸಿದ್ದು, ನಿರ್ಮಾಪರಾದ ದೇವೇಂದ್ರ ಹಾಗೂ ಮಮತಾ ದೇವೇಂದ್ರ ಖುಷಿಗೆ ಪಾರವೇ ಇಲ್ಲ. ಕನ್ನಡ ಸಿನಿಮಾವೊಂದು, ಈ ರೀತಿ ವಿಶ್ವದಾದ್ಯಂತ ಥಿಯೇಟರ್‌ನಲ್ಲಿ ಹಂಗಾಮ ಮಾಡ್ತಿರೋದು ಹೆಮ್ಮೆಯ ವಿಷಯ. ಇದೊಂಥರಾ 80-90ರ ದಶಕದ ಆ ಗತವೈಭವವನ್ನ ಮತ್ತೆ ಮರಳಿ ತಂದಂತಿದೆ. ಯಾಕಂದ್ರೆ ಜನ ಟ್ರ್ಯಾಕ್ಟರ್‌ಗಳ ಮೂಲಕ ಹಳ್ಳಿಗಳಿಂದ ಸ್ಮಾಲ್ ಟೌನ್ಸ್‌ಗೆ ಬಂದು ಸಿನಿಮಾನ ಕಣ್ತುಂಬಿಕೊಳ್ತಿದ್ದಾರೆ. ಸಕುಟುಂಬ ಸಮೇತ ಪ್ರೇಮದ ಊರಲಿ ಚಿತ್ರಕ್ಕೆ ಜನ ಪ್ರೀತಿ ಕೊಡ್ತಿದ್ದು, ಇದು ಬಾಲಿವುಡ್‌ನ ಹನುಮಾನ್ ಅಂಶ್ ರೀತಿ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ, ಸುಂಟರಗಾಳಿ ಸೃಷ್ಟಿಸಿರೋದು ಇಂಟರೆಸ್ಟಿಂಗ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
