ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ

Untitled design (14)

ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಈಗ ಬಹುದೊಡ್ಡ ಸುನಾಮಿ, ಸುಂಟರಗಾಳಿ ಎದ್ದಿದೆ. ಚಿಕ್ಕ ಬಜೆಟ್ ಆದ್ರೂ ದೊಡ್ಡ ಕಂಟೆಂಟ್‌ನಿಂದ ಬಾಕ್ಸಾಫೀಸ್‌ ಧೂಳೆಬ್ಬಿಸ್ತಿದೆ ಪ್ರೇಮದ ಊರಲಿ. ಹುಬ್ಬಳ್ಳಿ ಮಣ್ಣಲ್ಲಿ ಗಣೇಶ್ ಹಾಗೂ ಬೃಂದಾವಿಹಾರಿ ಪ್ರೊಡ್ಯೂಸರ್ ಸಮೃದ್ಧಿ ಮಂಜುನಾಥ್, ತಮ್ಮ ಸಿನಿಮಾ ಪೋಸ್ಟ್‌ಪೋನ್ ಮಾಡಿ, ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇಂಡಸ್ಟ್ರಿ ಅಂದ್ರೆ ಹೀಗಿರಬೇಕು ಅಂತ ಸಾಬೀತು ಪಡಿಸಿರೋ ಆ ಗೋಲ್ಡನ್ ಹಾರ್ಟ್ ಕಥೆ ಏನ್ ಗೊತ್ತಾ..? ಬನ್ನಿ ತೋರಿಸ್ತೀವಿ.

ಅಕ್ಟೋಬರ್ ತಿಂಗಳಿನಲ್ಲಿ ಸ್ಯಾಂಡಲ್‌ವುಡ್‌ಗಿಂತ ದೊಡ್ಡ ಹೈ-ವೋಲ್ಟೇಜ್ ಕದನ ಬೇರೊಂದಿರಲಿಲ್ಲ. ಆದರೆ, ಬಾಕ್ಸಾಫೀಸ್ ಕದನದ ನಡು ನಡುವೆಯೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಬೃಂದಾವಿಹಾರಿ ಚಿತ್ರತಂಡ ತೆಗೆದುಕೊಂಡ ಒಂದು ಬಿಗ್ ಡಿಸಿಷನ್ ಇಡೀ ಚಿತ್ರರಂಗವನ್ನೇ ಶಾಕ್ ಮಾಡುವಂತೆ ಮಾಡಿದೆ. ಅಕ್ಟೋಬರ್ 16ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿದ್ದ ಗಣೇಶ್ ಅಭಿನಯದ ಬೃಂದಾವಿಹಾರಿ ಚಿತ್ರದ ಬಿಡುಗಡೆ ದಿಢೀರ್ ಮುಂದೂಡಿಕೆಯಾಗಿದೆ. ಸ್ವತಃ ಬಿಗ್ ಸ್ಟಾರ್ ಒಬ್ಬರು ಬೇರೊಂದು ಚಿತ್ರದ ಭರ್ಜರಿ ಓಟಕ್ಕಾಗಿ ತಮ್ಮ ಸಿನಿಮಾವನ್ನೇ ಮುಂದಕ್ಕೆ ಹಾಕಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಬೃಂದಾವಿಹಾರಿ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಈ ಗ್ರಾಂಡ್ ಟ್ವಿಸ್ಟ್ ಅನೌನ್ಸ್ ಮಾಡಲಾಯಿತು. ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್, ‘ರಾಮ ರಾಮ’ ಹಾಡಿಗೆ ಸಖತ್ ಸ್ಟೆಪ್ ಹಾಕಿ ದರ್ಶನ ನೀಡಿದರು. ಇದೆ ವೇಳೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದ, ಗೌತಮ್ ನಾಯರ್ ಕಂಠದಲ್ಲಿ ಮೂಡಿಬಂದಿರುವ ಕುಡಿದೆ ಕುಡಿದೆ ಎಂಬ ಜಬರ್ದಸ್ತ್ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿ ಜಗತ್ತನ್ನೇ ತೂಗಿಸಿದರು. ಇನ್ನು ಈ ಇವೆಂಟ್ ನಲ್ಲಿ ಸಚಿವ ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ವೀರೇಂದ್ರ ಪಪ್ಪಿ, ರಾಜು ಗೌಡ ಹಾಗೂ ನಟ ಡಾರ್ಲಿಂಗ್ ಕೃಷ್ಣ ಸೇರಿದಂತೆ ಪ್ರಭಾವಿ ರಾಜಕಾರಣಿಗಳು ಮತ್ತು ಸಿನಿಸ್ಟಾರ್‌ಗಳ ಸಾಲು ಈ ಇವೆಂಟ್‌ಗೆ ಸಾಕ್ಷಿಯಾಯಿತು.

ಸಿನಿಮಾ ಮುಂದೂಡಿಕೆಯಾದ ರಿಯಲ್ ಸೀಕ್ರೆಟ್ ಅಂದರೆ, ಸದ್ಯ ಬಾಕ್ಸಾಫೀಸ್‌ನಲ್ಲಿ ಅಲೆ ಎಬ್ಬಿಸಿರೋ ಪ್ರೇಮದ ಊರಲಿ ಸಿನಿಮಾ. ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಸ್ಕ್ರೀನ್‌ಗಳಲ್ಲಿ ಬಹಳ ಸೈಲೆಂಟ್ ಆಗಿ ರಿಲೀಸ್ ಆಗಿದ್ದ ಪ್ರೇಮದ ಊರಲಿ, ಕಂಟೆಂಟ್ ಪವರ್‌ನಿಂದಾಗಿ ಈಗ ಬರೋಬ್ಬರಿ 700ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ಈ ಚಿತ್ರ, ಚಿತ್ರಮಂದಿರಗಳಲ್ಲಷ್ಟೇ ಅಲ್ಲದೆ ಪ್ರೇಕ್ಷಕರ ಮನಸ್ಸಿನಲ್ಲೂ ಜಾಗ ಗಿಟ್ಟಿಸಿಕೊಂಡಿದೆ.

ಇದೆ ವೇಳೆ ಮಾತನಾಡಿದ ಬೃಂದಾವಿಹಾರಿ ನಿರ್ಮಾಪಕ ಸಮೃದ್ಧಿ ಮಂಜುನಾಥ್, ಸುಮಾರು ವರ್ಷಗಳ ಬಳಿಕ ಕನ್ನಡದಲ್ಲಿ ಸಣ್ಣ ಪ್ರಮಾಣದ ಸಿನಿಮಾವೊಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ನಾವು ಇನ್ನೊಬ್ಬರ ಹೊಟ್ಟೆಮೇಲೆ ಹೊಡೆಯಲು ಸಿದ್ಧರಿಲ್ಲ. ಚಿಕ್ಕ ಕಲಾವಿದರು ಜನ್ಮ ನೀಡಿದ ಒಳ್ಳೆ ಸಿನಿಮಾಗೆ ನಾವು ಅಡ್ಡಬರುವುದು ಚಿತ್ರರಂಗಕ್ಕೆ ಮಾಡುವ ದ್ರೋಹ. ಪ್ರೇಮದ ಊರಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅದ್ಭುತ ಮಾತುಗಳನ್ನಾಡಿದರು. ಈ ಜಾಣ ಹಾಗೂ ಹೃದಯವಂತಿಕೆಯ ನಿರ್ಧಾರಕ್ಕೆ ರಂಗಾಯಣ ರಘು ಜೈಕಾರ ಹಾಕಿ ಶರಣಾಗಿದ್ದಾರೆ.

ನಟ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ನಾನೇ ಖುದ್ದಾಗಿ ಪ್ರೇಮದ ಊರಲಿ ಸಿನಿಮಾವನ್ನು ಪ್ರಮೋಟ್ ಮಾಡಿದ್ದೀನಿ. ಆ ಸಿನಿಮಾ ಇನ್ನು ಹಲವು ವಾರಗಳು ಯಶಸ್ವಿಯಾಗಿ ಪ್ರದರ್ಶನ ಕಾಣಲಿ, ಸಾವಿರಾರು ಥಿಯೇಟರ್‌ಗಳಲ್ಲಿ ಓಡಲಿ ಅನ್ನೋದೇ ನನ್ನ ಆಶಯ. ಅದಕ್ಕಾಗಿಯೇ ನಮ್ಮ ಬೃಂದಾವಿಹಾರಿ ಸಿನಿಮಾವನ್ನು ನವೆಂಬರ್ 20ಕ್ಕೆ ಶಿಫ್ಟ್ ಮಾಡಿದ್ದೇವೆ ಎಂದು ತಮ್ಮ ಕರುಣಾಮಯಿ ನಿರ್ಧಾರದ ಹಿಂದೆ ಇರೋ ಪ್ರೀತಿಯನ್ನು ಬಿಚ್ಚಿಟ್ಟರು.

ವಿಭಿನ್ನ ಹಾಗೂ ಪ್ರಬುದ್ಧ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಹಿರಿಯ ನಟ ರಂಗಾಯಣ ರಘು, ಪ್ರೇಮದ ಊರಲಿ ಚಿತ್ರದಲ್ಲಿ ನಾಗಣ್ಣ ಪಾತ್ರದಲ್ಲಿ ಅಪ್ಪನ ಸೆಂಟಿಮೆಂಟ್ ಹಾಗೂ ಭಾವನಾತ್ಮಕ ಸನ್ನಿವೇಶಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, ಚಿತ್ರರಂಗದ ಒಗ್ಗಟ್ಟು ಮತ್ತು ಬೆಳೆವಣಿಗೆಗಾಗಿ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹಾಗು ನಟ ಗಣೇಶ್ ತೆಗೆದುಕೊಂಡ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕ್ರಿಷ್ಣಂ ಪ್ರಣಯ ಸಖಿ ಯಶಸ್ಸಿನ ನಂತರ ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬೃಂದಾವಿಹಾರಿ ಚಿತ್ರದಲ್ಲಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಾಯಕಿಯರಾಗಿ ಮಿಂಚಿದ್ದಾರೆ. ಕೆವಿಸಿ ಪ್ರೊಡಕ್ಷನ್ ಮತ್ತು ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ನವೆಂಬರ್ 20ರಂದು ಹೊಸ ಅಧ್ಯಾಯ ಬರೆಯಲು ಕಾಯುತ್ತಿದೆ.

ಅಂದಹಾಗೆ, ಈ ನಿರ್ಧಾರದ ಹಿಂದೆ ಕೇವಲ ದೊಡ್ಡ ಮನಸ್ಸು ಮಾತ್ರವಲ್ಲ, ತಂತ್ರಗಾರಿಕೆಯೂ ಇದೆ. ಅಕ್ಟೋಬರ್ 16ರಂದು ತೆಲುಗಿನ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅಭಿನಯದ ಬಿಗ್ ಬಜೆಟ್ ಸಿನಿಮಾ ರಣಬಾಲಿ ಹಾಗೂ ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹೈ-ವೋಲ್ಟೇಜ್ ಜೈಲರ್ 2 ಚಿತ್ರಗಳು ಜಾಗತಿಕವಾಗಿ ಅಖಾಡಕ್ಕಿಳಿಯುತ್ತಿವೆ. ಇವುಗಳ ಮಧ್ಯೆ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಥಿಯೇಟರ್ ಕ್ಲ್ಯಾಶ್ ಆಗುವುದನ್ನು ತಪ್ಪಿಸಲು ಗಣೇಶ್ ಟೀಮ್ ನವೆಂಬರ್ 20ರ ಭರವಸೆಯ ದಿನಾಂಕವನ್ನು ಲಾಕ್ ಮಾಡಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version