ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಗೊಂದಲಗಳು ಮುಂದುವರಿಯುತ್ತಿವೆ. ನಟಿ ರಮ್ಯಾ ಕುರಿತು ಅಶ್ಲೀಲ ಪೋಸ್ಟ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿ ತನಿಖೆ ಆರಂಭವಾಗಿರುವ ಬೆನ್ನಲ್ಲೇ, ನಟ ಪ್ರಥಮ್ (Pratham) ಕೂಡ ಜೀವ ಬೆದರಿಕೆ ವಿಷಯಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹೌದು, ಜುಲೈ 22ರಂದು ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ, ವ್ಯಕ್ತಿಯೊಬ್ಬ ಡ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ, ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ಕಳೆದ ಶನಿವಾರ (ಜುಲೈ 26) ಎಸ್‌ಪಿ ಸಿ.ಕೆ. ಬಾಬಾ ಅವರನ್ನು ಭೇಟಿಯಾಗಿ ಘಟನೆಯ ವಿವರ ನೀಡಿದ್ದ ಪ್ರಥಮ್, ನಿನ್ನೆ (ಜುಲೈ 29) ಪುನಃ ಲಿಖಿತ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ, ರೌಡಿಶೀಟರ್ ಬೇಕರಿ ರಘು ಮತ್ತು ಯಶಸ್ವಿನಿ ಎಂಬವರ ವಿರುದ್ಧ ಆರೋಪ ಮಾಡಲಾಗಿದೆ. ದೇವಸ್ಥಾನಕ್ಕೆ ತೆರಳಿದ್ದ ವೇಳೆ ಕೆಲವು ವ್ಯಕ್ತಿಗಳು ಬಲವಂತವಾಗಿ ಕಾಡಿನ ಒಳಗೆ ಕರೆದೊಯ್ದಿದ್ದಾರೆ. ಅಲ್ಲಿ, ದರ್ಶನ್ ಜೊತೆ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬ ಡ್ಯಾಗರ್ ತೋರಿಸಿ, “ನಮ್ಮ ಬಾಸ್ ಬಗ್ಗೆ ಏನೇನೋ ಮಾತಾಡ್ತಿಯಾ?” ಎಂದು ಬೆದರಿಕೆ ಹಾಕಿದ್ದಾನೆ ಎಂದು ಪ್ರಥಮ್ ತಿಳಿಸಿದ್ದಾರೆ. ಈ ವೇಳೆ ರಕ್ಷಕ್ ಬುಲೆಟ್ ಎಂಬಾತನೂ ಇದ್ದ ಎಂದು ಆರೋಪಿಸಿದ್ದಾರೆ.
ಜುಲೈ 29ರ ಸಂಜೆಯಿಂದ ದರ್ಶನ್ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿರುವ ಪ್ರಥಮ್, ಇದರಿಂದ ವೈಯಕ್ತಿಕವಾಗಿ ತೀವ್ರ ತೊಂದರೆಗೆ ಒಳಗಾಗಿದ್ದೇನೆ, ಕುಟುಂಬಕ್ಕೂ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರು ತಕ್ಷಣವೇ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ಟ್ರೋಲ್‌ಗಳಿಂದ ಬೇಸತ್ತ ಪ್ರಥಮ್, ಎಸ್‌ಪಿ ಕಚೇರಿ ಎದುರು ಜಿಟಿಜಿಟಿ ಮಳೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದ್ದರು. ಬಳಿಕ ಎಎಸ್‌ಪಿಗಳಾದ ನಾಗರಾಜ್ ಮತ್ತು ವೆಂಕಟೇಶ್ ಪ್ರಸನ್ನ ಸ್ಥಳಕ್ಕೆ ಆಗಮಿಸಿ, ಪ್ರಥಮ್‌ರನ್ನು ಮನವೊಲಿಸಿ ಕಳುಹಿಸಿದ್ದಾರೆ.
ಈ ಘಟನೆಯಿಂದಾಗಿ ಮನನೊಂದ ಪ್ರಥಮ್, ಸಿನಿಮಾ ರಂಗ ಮತ್ತು ಬೆಂಗಳೂರನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. “ಕೊಕೇನ್ ಸಿನಿಮಾ ಮುಗಿಸಿ ಚಾಮರಾಜನಗರಕ್ಕೆ ತೆರಳುತ್ತೇನೆ. ವೈಯಕ್ತಿಕ ತೊಂದರೆಯಿಂದ ಕುಟುಂಬಕ್ಕೆ ತೊಂದರೆಯಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ, ಒಬ್ಬ ನಟನ ಅಭಿಮಾನಿಗಳ ಟ್ರೋಲಿಂಗ್ ಮತ್ತು ಬೆದರಿಕೆಗಳು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದು, ಎಫ್‌ಐಆರ್ ದಾಖಲಾಗಿದೆ, ಮತ್ತು ಪ್ರಥಮ್‌ಗೆ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ.