ಬೆಂಗಳೂರು: ಬಹುನಿರೀಕ್ಷಿತ ‘ಧುರಂಧರ್-2’ ಚಿತ್ರದ ಪರ-ವಿರೋಧದ ಚರ್ಚೆ ಈಗ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗಿದೆ. ಚಿತ್ರವನ್ನು ‘ಬೋರಿಂಗ್ ಪ್ರೊಪಗಾಂಡ’ ಎಂದು ಟೀಕಿಸಿದ್ದ ನಟಿ ರಮ್ಯಾ ವಿರುದ್ಧ ಸಮಾಜ ಸೇವಕ ಹಾಗೂ ಉದ್ಯಮಿ ಪ್ರಶಾಂತ್ ಸಂಬರಗಿ ಕೆಂಡಾಮಂಡಲವಾಗಿದ್ದಾರೆ. ರಮ್ಯಾ ಅವರ ಟೀಕೆಗೆ ಸುದೀರ್ಘವಾದ ಓಪನ್ ಲೆಟರ್ (ಬಹಿರಂಗ ಪತ್ರ) ಬರೆಯುವ ಮೂಲಕ ಪ್ರಶಾಂತ್ ಸಂಬರಗಿ ತಿರುಗೇಟು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪ್ರಶಾಂತ್ ಸಂಬರಗಿ, ರಮ್ಯಾ ಅವರ ಪೋಸ್ಟ್ಗೆ ಕಟುವಾದ ಪದಗಳಲ್ಲಿ ಉತ್ತರ ನೀಡಿದ್ದಾರೆ. ರಮ್ಯಾ ಅವರೇ, ನೀವು ಸಿನಿಮಾ ಪಂಡಿತರಲ್ಲ. ನಿಮ್ಮ ಈ ಅಭಿಪ್ರಾಯ ಕಲಾತ್ಮಕವಾಗಿಲ್ಲ, ಬದಲಾಗಿ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ನೀವು ಸಿನಿಮಾವನ್ನು ಒಬ್ಬ ಪ್ರೇಕ್ಷಕಿಯಾಗಿ ನೋಡುತ್ತಿಲ್ಲ, ಬದಲಾಗಿ ಕಾಂಗ್ರೆಸ್ನ ಚಿಯರ್ ಲೀಡರ್ ಆಗಿ ನೋಡಿದ್ದೀರಿ ಎಂದು ನೇರವಾಗಿ ಲೇವಡಿ ಮಾಡಿದ್ದಾರೆ.
ಸಂಬರಗಿ ತಮ್ಮ ಪತ್ರದಲ್ಲಿ ರಮ್ಯಾ ಅವರ ಹಳೆಯ ಹೇಳಿಕೆಗಳನ್ನು ನೆನಪಿಸಿ, ಪಾಕಿಸ್ತಾನ ನರಕವಲ್ಲ ಎಂದು ಹಿಂದೆ ಹೇಳಿಕೆ ನೀಡಿದ್ದ ನೀವು, ಭಾರತದ ಶೌರ್ಯವನ್ನು ಸಾರುವ ಧುರಂಧರ್-2 ನಂತಹ ಸಿನಿಮಾವನ್ನು ಮೆಚ್ಚಿಕೊಳ್ಳುತ್ತೀರಿ ಎಂದು ನಿರೀಕ್ಷಿಸುವುದು ತಪ್ಪು. ಈ ಚಿತ್ರದಲ್ಲಿ ದೇಶಪ್ರೇಮದ ಕಿಚ್ಚಿದೆ, ಅದು ನಿಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿನಿಮಾದಲ್ಲಿ ಯಾವುದಾದರೂ ಒಂದು ತಾಂತ್ರಿಕ ತಪ್ಪು ಅಥವಾ ಕಥೆಯ ದೋಷವಿದ್ದರೆ ತೋರಿಸಿ, ಸುಮ್ಮನೆ ಪ್ರೊಪಗಾಂಡ ಎಂದು ಲೇಬಲ್ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿನ ಹಿಂಸೆ ಮತ್ತು ಬೋರಿಂಗ್ ಅಧ್ಯಾಯದ ಬಗ್ಗೆ ರಮ್ಯಾ ಮಾಡಿದ್ದ ಕಾಮೆಂಟ್ಗೆ ಟಾಂಗ್ ನೀಡಿರುವ ಸಂಬರಗಿ, ನಿಮ್ಮ ಕಣ್ಣಿಗೆ ದೇಶಭಕ್ತಿ ಬೋರಿಂಗ್ ಆಗಿ ಕಾಣುತ್ತಿರಬಹುದು. ಇಂತಹ ಅದ್ಭುತ ಚಿತ್ರದ ಬಗ್ಗೆ ನೆಗೆಟಿವ್ ಪ್ರಚಾರ ಮಾಡುತ್ತಿರುವುದು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಬೇಗ ಹುಷಾರಾಗಿ ರಮ್ಯಾ (Get well soon) ಎಂದು ವ್ಯಂಗ್ಯ ಮಾಡಿದ್ದಾರೆ.





