ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂದಿನ ಸಿನಿಮಾ ‘ಫೌಜಿ’ಯಲ್ಲಿ ಕನ್ನಡ ನಟಿ ಚೈತ್ರಾ ಆಚಾರ್ ನಟಿಸಲಿದ್ದಾರೆ. ‘ಬಾಹುಬಲಿ’ ಸಿನಿಮಾಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪ್ರಭಾಸ್ ಅವರ ಈ ಹೊಸ ಚಿತ್ರದಲ್ಲಿ ಚೈತ್ರಾ ಆಚಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾದ ಚೈತ್ರಾ ಆಚಾರ್ ಅವರಿಗೆ ಪ್ರಭಾಸ್ ಅವರ ‘ಫೌಜಿ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಲಭಿಸಿದೆ. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದ ಚೈತ್ರಾ, ಇತ್ತೀಚೆಗೆ ತಮಿಳು ಚಿತ್ರ ‘3 ಬಿಎಚ್ಕೆ’ಯಲ್ಲೂ ನಟಿಸಿದ್ದಾರೆ.
‘ಸೀತಾ ರಾಮಂ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ನಿರ್ದೇಶಕ ರಘು ಹನುಪುಡಿ ಅವರೇ ‘ಫೌಜಿ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚೈತ್ರಾ ಆಚಾರ್ ಅವರ ನಟನಾ ಕೌಶಲ್ಯಕ್ಕೆ ಮಾರುಹೋದ ರಘು ಹನುಪುಡಿ ಅವರು ಈ ಚಿತ್ರದಲ್ಲಿ ಚೈತ್ರಾಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ. ಚಿತ್ರದಲ್ಲಿ ಎರಡನೇ ನಾಯಕಿಯ ಪಾತ್ರವನ್ನು ಚೈತ್ರಾ ಆಚಾರ್ ಅವರು ಮಾಡುವ ಸಾಧ್ಯತೆ ಇದೆ.
ಈ ಸಿನಿಮಾ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡ ಚೈತ್ರಾ ಆಚಾರ್ ಅವರು, “ರಘು ಹನುಪುಡಿ ಅವರ ಈ ಸನ್ನಿವೇಶದ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ‘ಫೌಜಿ’, ನಮ್ಮ ಇತಿಹಾಸದಿಂದ ಕಣ್ಮರೆ ಆಗಿರುವ ಕೆಚ್ಚೆದೆಯ ಸೈನಿಕ ಈತ. ಪ್ರಭಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
‘ಫೌಜಿ’ ಚಿತ್ರದಲ್ಲಿ ಅಮೆರಿಕದ ನಿವಾಸಿಯಾಗಿರುವ ಇಮಾನ್ವಿ ಅವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಮಾನ್ವಿ ಅವರು ವೃತ್ತಿಯರಿತು ನರ್ತಕಿಯಾಗಿದ್ದು, ಅಮೆರಿಕಾದಲ್ಲಿ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರವಾಗಿದೆ.
‘ಫೌಜಿ’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರವು ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ. ಪ್ರಭಾಸ್ ಅವರು ಇತಿಹಾಸದಲ್ಲಿ ಮರೆಯಾಗಿರುವ ಒಬ್ಬ ಸೈನಿಕನ ಪಾತ್ರವನ್ನು ಮಾಡಲಿದ್ದಾರೆ.
ಚೈತ್ರಾ ಆಚಾರ್ ಅವರು ಪ್ರಸ್ತುತ ‘ಉತ್ತರಕಾಂಡ’, ತಮಿಳು ಚಿತ್ರಗಳಾದ ‘ಮೈ ಲಾರ್ಡ್’, ‘ಸ್ಟ್ರಾಬೆರ್ರಿ’, ‘ಮಾರ್ನಮಿ’ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಿಂದ ಹಿಡಿದು ತೆಲುಗು, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ಚೈತ್ರಾ, ಈಗ ಪ್ರಭಾಸ್ ಅವರ ಚಿತ್ರದ ಮೂಲಕ ಜನಮನ ಸೆಲೆಯಲು ಸಜ್ಜಾಗಿದ್ದಾರೆ.