ನವದೆಹಲಿ: ಚೈತ್ರ ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಅಭಿನಯದ ‘ಶ್ರೀ ಕೃಷ್ಣದೇವರಾಯ’ ಚಿತ್ರದ ಭಕ್ತಿಗೀತೆಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಈ ವಿಶೇಷ ವಿಡಿಯೋ ಲಿಂಕ್ ಹಂಚಿಕೊಂಡಿರುವ ಮೋದಿ, ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಮಹಿಮೆಯನ್ನು ಕೊಂಡಾಡಿದ್ದಾರೆ.
ಚೈತ್ರ ನವರಾತ್ರಿಯ ಅಂಗವಾಗಿ ದೇಶದ ಜನತೆಗೆ ಶುಭ ಕೋರಿರುವ ಪ್ರಧಾನಿ ಮೋದಿ, ಜಗನ್ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ 1970ರಲ್ಲಿ ತೆರೆಕಂಡ ಐತಿಹಾಸಿಕ ಚಿತ್ರ ‘ಶ್ರೀ ಕೃಷ್ಣದೇವರಾಯ’ ಸಿನಿಮಾದ ಸುಪ್ರಸಿದ್ಧ ‘ಶ್ರೀ ಚಾಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
जगतजननी माता पर अटूट विश्वास उनके भक्तों में नई चेतना और स्फूर्ति का संचार करने वाला है।https://t.co/kSHuvxatz9
— Narendra Modi (@narendramodi) March 21, 2026
ಈ ಭಕ್ತಿಗೀತೆಯು ದಶಕಗಳ ನಂತರವೂ ಕನ್ನಡಿಗರ ಮನೆಮಾತಾಗಿ ಉಳಿಯಲು ಅದರ ಸಾಹಿತ್ಯ ಮತ್ತು ಸಂಗೀತವೇ ಕಾರಣ. ಹುಣಸೂರು ಕೃಷ್ಣಮೂರ್ತಿ ಮತ್ತು ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯದ ಶಕ್ತಿ ಈ ಹಾಡಿಗಿದೆ. ಖ್ಯಾತ ಸಂಗೀತ ನಿರ್ದೇಶಕ ಟಿ. ಜಿ. ಲಿಂಗಪ್ಪ ಅವರು ಈ ಹಾಡಿಗೆ ಮಧುರವಾದ ಸಂಗೀತ ನೀಡಿದ್ದಾರೆ ಇನ್ನೂ ಪಿ. ಲೀಲಾ ಮತ್ತು ಎಸ್. ಗೋವಿಂದರಾಜು ಅವರ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡು ಇಂದಿಗೂ ಭಕ್ತರ ಮನದಲ್ಲಿ ಭಕ್ತಿಭಾವ ಮೂಡಿಸುತ್ತದೆ.
ಪ್ರಧಾನಿ ಮೋದಿ ಅವರು ಈ ಹಾಡನ್ನು ಹಂಚಿಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮತ್ತು ಡಾ. ರಾಜ್ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ. ನಮ್ಮ ಅಣ್ಣಾವ್ರನ್ನು ಮತ್ತು ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ ಪ್ರಧಾನಿಗಳಿಗೆ ಧನ್ಯವಾದಗಳು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
