ಭಾರತೀಯ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ಹೆಸರಾಂತ ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಟನ್ ಸ್ಟಾರ್ ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳೊಂದಿಗೆ ಗಣೇಶ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದರೊಟ್ಟಿಗೆ ” ಪಿನಾಕ” ಚಿತ್ರದ ಟೀಸರ್ ಸಹ ಅನಾವರಣವಾಯಿತು. ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದ್ದು, ಗೋಲ್ಡನ್ ಮೆಗಾ ಸ್ಟಾರ್ ಅಭಿಮಾನಿಗಳು ಟೀಸರ್ ನೋಡಿ ಗಣೇಶ್ ಅವರ ಹೊಸ ಲುಕ್ ಗೆ ಫಿದಾ ಆಗಿದ್ದಾರೆ. ಟೀಸರ್ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಹಲವು ವರ್ಷಗಳಿಂದ ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿದ್ದೇನೆ. ಈ ಸಿನಿಮಾ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಗಣೇಶ್ ಅವರಿಗೆ ಧನ್ಯವಾದ. ಇನ್ನೂ, ನಾನು ಈವರೆಗೂ “ಪಿನಾಕ” ಚಿತ್ರದ ಕರಿತು ಹೆಚ್ಚು ಮಾತನಾಡಿರಲಿಲ್ಲ. ಏಕೆಂದರೆ ನಾನು ಮಾತಾಡುವುದು ಬೇಡ ಕೆಲಸ ಮಾತನಾಡಲಿ ಎಂದು. ಈಗ ಟೀಸರ್ ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಮನತುಂಬಿ ಬಂದಿದೆ. ಟೀಸರ್ ನಲ್ಲಿ ಹೆಚ್ಚು ಹೇಳಿಲ್ಲ. ಕೇವಲ 30% ಮಾತ್ರ ಚಿತ್ರದ ಕುರಿತು ಹೇಳಿದ್ದೇವೆ. ಚಿತ್ರದಲ್ಲಿ ಇನ್ನೂ ಬಹಳಷ್ಟಿದೆ. ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಮುಂಬರುವ ಟ್ರೇಲರ್ ನಲ್ಲೂ ಚಿತ್ರದ ಕುರಿತು ಇನ್ನಷ್ಟು ತಿಳಿಸುವುದಾಗಿ ನಿರ್ದೇಶಕ ಧನಂಜಯ್ ಹೇಳಿದರು.
“ಮುಂಗಾರು ಮಳೆ”ಯಿಂದ ನಾಯಕನಾಗಿ ಶುರುವಾದ ನನ್ನ ಸಿನಿ ಜರ್ನಿ ಈ ಹಂತ ತಲುಪಲು ದೇವರ, ತಂದೆ – ತಾಯಿ ಹಾಗೂ ಅಭಿಮಾನಿಗಳ ಆಶೀರ್ವಾದವೇ ಕಾರಣ. ಇನ್ನೂ, ನನ್ನ ಮಕ್ಕಳು ” ಕಾರ್ತಿಕೇಯ ೨” ಚಿತ್ರವನ್ನು ನೋಡಿದಾಗ, ನೀವು ಈತರಹದ ಚಿತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತಿದ್ದರು. ನಾನು ಶಿವ ಭಕ್ತ. “ಪಿನಾಕ” ಸಹ ಶಿವನ ಕುರಿತಾದ ಚಿತ್ರ. ಇಂತಹ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. ಈ ಚಿತ್ರದ ಕುರಿತು ನಿರ್ಮಾಪಕರು ನನ್ನ ಬಳಿ ಮಾತನಾಡಿದಾಗ, ಈ ಕಥೆ ಬಹಳ ಬಜೆಟ್ ಕೇಳುತ್ತದೆ. ನಿಮಗೆ ಹೊರೆಯಾಗಬಾರದು ಎಂದು ಹೇಳಿದೆ. ಅವರು ಇಲ್ಲ ಕಥೆ ಕೇಳುವ ಬಜೆಟ್ ಹಾಕಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಈ ಚಿತ್ರದ ಚಿತ್ರೀಕರಣದಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಕ್ಲೈಮ್ಯಾಕ್ಸ್ ಅಂತು ನಾನು ಈವರೆಗೂ ಯಾವ ಚಿತ್ರದಲ್ಲೂ ನೋಡಿರದ ಕ್ಲೈಮ್ಯಾಕ್ಸ್ ಎನ್ನಬಹುದು. 12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನಗಳ ಚಿತ್ರೀಕರಣ ಮಾಡಿದ್ದೇವೆ. “ಪಿನಾಕ”, ಚಾರುಕೇಶ ರಾಜನ ಕಥೆ. ಈ ಚಿತ್ರ ಚೆನ್ನಾಗಿ ಮೂಡಿಬರಲು ತಂಡದ ಸಹಕಾರವೇ ಕಾರಣ. ಈ ಚಿತ್ರದಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ ಅವರಂತಹ ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ. ಅಕ್ಟೋಬರ್ 2ರಂದು ತೆರೆಗೆ ಬರುತ್ತಿರುವ ಈ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡಲಿದೆ ಎಂದರು ನಾಯಕ ಗೋಲ್ಡನ್ ಸ್ಟಾರ್ ಗಣೇಶ್.
ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ರಾಜೇಶ್ ಮಾತನಾಡಿ, ‘ಗಣೇಶ್ ಜೊತೆಗೆ ಚಿತ್ರ ಮಾಡಬೇಕು ಎಂಬುದು ನನ್ನ ಹಾಗೂ ನನ್ನ ಸಹೋದರನ (ವಿಶ್ವಪ್ರಸಾದ್) ಆಸೆಯಾಗಿತ್ತು. ನಮ್ಮ ಸಂಸ್ಥೆಯ “ಕಾರ್ತಿಕೇಯ ೨” ಚಿತ್ರದ ಬಗ್ಗೆ ಗಣೇಶ್ ಅವರು ತುಂಬಾ ಮೆಚ್ಚುಗೆಯ ಮಾತುಗಳಾಡಿದರು. ಅವರ ಮಗ ವಿಹಾನ್ ಗೂ ಆ ಚಿತ್ರ ಬಹಳ ಇಷ್ಟವಾಯಿತಂತೆ. ಹಾಗಾಗಿ ನಾವು ಸಹ ಪೌರಾಣಿಕ ಹಿನ್ನೆಲೆಯಿರುವ ಹಾಗೂ ಶಿವನ ಕುರಿತಾದ ಕಥಾಹಂದರವಿರುವ ಈ ಕಥೆ ಆಯ್ಕೆ ಮಾಡಿಕೊಂಡೆವು. ಚಿತ್ರತಂಡದ ಸದಸ್ಯರ ಶ್ರಮದಿಂದ “ಪಿನಾಕ” ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಜನರಿಗೂ ಈ ಚಿತ್ರ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು. ವಿಜಯ ರಾಜೇಶ್ ಅವರು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಸಹ ನಿರ್ಮಾಪಕಿ ಕೃತಿ ಪ್ರಸಾದ್ ಅವರು ಮಾತನಾಡಿ, ಉತ್ತಮ ಚಿತ್ರ ಮೂಡಿಬರಲು ಸಹಕಾರ ನೀಡಿದ “ಪಿನಾಕ” ಚಿತ್ರತಂಡದವರಿಗೆ ಧನ್ಯವಾದ ಹೇಳಿದರು.
ಹಿರಿಯ ಕಲಾವಿದರಾದ ರಂಗಾಯಣ ರಘು ಹಾಗೂ ಸಾಧುಕೋಕಿಲ ಅವರು “ಪಿನಾಕ” ಚಿತ್ರದ ಚಿತ್ರೀಕರಣದ ಅನುಭವ ಹಂಚಿಕೊಂಡರು. ನಾಯಕಿ ಅರ್ಚನಾ ಅಯ್ಯರ್ ಮಾತನಾಡಿ ಒಂದೊಳ್ಳೆ ಚಿತ್ರದಲ್ಲಿ ನಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಟರಾದ ರೋಬೊ ಗಣೇಶ್ ಹಾಗೂ ರವೀಂದ್ರನಾಥ್ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಗೌರಾ ಹರಿ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
