ಟಾಲಿವುಡ್‌ನ ಜನಪ್ರಿಯ ನಟ, ಜನಸೇನಾ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಇಂದು (ಸೆಪ್ಟೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಪವನ್ ಕಲ್ಯಾಣ್ ಅವರಿಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಸ್ಟಾರ್ ನಟನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್, ಈಗ ಆಂಧ್ರ ಪ್ರದೇಶ ರಾಜಕೀಯದಲ್ಲೂ ಪ್ರಮುಖ ಶಕ್ತಿಯಾಗಿದ್ದಾರೆ. ಈ ನಡುವೆ ಅವರ ಆಸ್ತಿ, ಕಾರುಗಳು ಹಾಗೂ ಸಾಲದ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಬಂದಿವೆ.
2024ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸಿದ್ದರು. ಚುನಾವಣಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಅಫಿಡವಿಟ್‌ನಲ್ಲಿ ಘೋಷಿಸಬೇಕಾಗುತ್ತದೆ. ಪವನ್ ಕಲ್ಯಾಣ್ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಸುಮಾರು 164 ಕೋಟಿ ರೂಪಾಯಿ.
2019ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಪವನ್ ಕಲ್ಯಾಣ್ ಘೋಷಿಸಿದ್ದ ಆಸ್ತಿ ಮೌಲ್ಯ ಸುಮಾರು 52.85 ಕೋಟಿ ರೂಪಾಯಿ ಆಗಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಘೋಷಿತ ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ.
ಪವನ್ ಕಲ್ಯಾಣ್ ಹೆಸರಿನಲ್ಲಿ ಹಲವು ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳಿವೆ. ಒಟ್ಟು 11 ವಾಹನಗಳ ಮೌಲ್ಯ ಸುಮಾರು 14 ಕೋಟಿಗೂ ಅಧಿಕ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಸುಮಾರು 5.47 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ಸ್ಪೋರ್ಟ್, 2.53 ಕೋಟಿ ರೂ. ಮೌಲ್ಯದ ಟೊಯೋಟಾ ಲ್ಯಾಂಡ್ ಕ್ರೂಸರ್, 2.42 ಕೋಟಿ ರೂ. ಮೌಲ್ಯದ ಮರ್ಸಿಡಿಸ್-ಬೆಂಜ್ ಮೇಬ್ಯಾಕ್ ಎಸ್-ಕ್ಲಾಸ್ ಸೇರಿದಂತೆ ಹಲವು ದುಬಾರಿ ವಾಹನಗಳಿವೆ. ಮರ್ಸಿಡಿಸ್-ಬೆಂಜ್ ಆರ್-ಕ್ಲಾಸ್, ಟೊಯೋಟಾ ವೆಲ್‌ಫೈರ್, ಜೀಪ್ ರ‍್ಯಾಂಗ್ಲರ್ ಸೇರಿದಂತೆ ಹಲವು ವಾಹನಗಳು ಅವರ ವಾಹನಗಳ ಪಟ್ಟಿಯಲ್ಲಿವೆ. ಸುಮಾರು 35 ಲಕ್ಷ ರೂ. ಮೌಲ್ಯದ ಹಾರ್ಲೆ-ಡೇವಿಡ್‌ಸನ್ ಬೈಕ್ ಕೂಡ ಇದೆ.
ಪವನ್ ಕಲ್ಯಾಣ್ ಬಳಿ ‘ವರಾಹಿ’ ಹೆಸರಿನ ಕ್ಯಾರವಾನ್ ಇದ್ದರೂ, ಅದು ಅವರ ಹೆಸರಿನಲ್ಲಿ ನೋಂದಣಿಯಾಗಿಲ್ಲದ ಕಾರಣ ಅಫಿಡವಿಟ್‌ನ ಆಸ್ತಿ ಪಟ್ಟಿಯಲ್ಲಿ ಸೇರಿಲ್ಲ.
ಅವರ ಸ್ಥಿರಾಸ್ತಿಯ ಮೌಲ್ಯ ಸುಮಾರು 118.36 ಕೋಟಿ ರೂ. ಆಗಿದ್ದರೆ, ಕಾರು, ಚಿನ್ನ ಸೇರಿದಂತೆ ಚರಾಸ್ತಿಯ ಮೌಲ್ಯ ಸುಮಾರು 46.17 ಕೋಟಿ ರೂ. ಎಂದು ಘೋಷಿಸಲಾಗಿದೆ. ಪಿತ್ರಾರ್ಜಿತ ಆಸ್ತಿಯ ಮೌಲ್ಯ ಸುಮಾರು 3.91 ಕೋಟಿ ರೂ. ಹಾಗೂ ಪತ್ನಿ ಅನ್ನಾ ಕೊನಿಡೆಲ ಅವರ ಹೆಸರಿನಲ್ಲಿ ಸುಮಾರು 2.95 ಕೋಟಿ ರೂ. ಆಸ್ತಿ ಇದೆ.
ಇನ್ನು ಪವನ್ ಕಲ್ಯಾಣ್ ಅವರ ಮೇಲೆ ಸಾಲದ ಹೊರೆ ಕೂಡ ಇದೆ. 2024ರ ಅಫಿಡವಿಟ್ ಪ್ರಕಾರ, ಒಟ್ಟು ಸುಮಾರು 65.77 ಕೋಟಿ ರೂ. ಸಾಲ ಇದ್ದು, ಇದರಲ್ಲಿ 17 ಕೋಟಿ ರೂ. ಬ್ಯಾಂಕ್ ಸಾಲವಾಗಿದೆ. ಚಿತ್ರರಂಗದ ಕೆಲ ಪ್ರಮುಖರಿಂದ ಸುಮಾರು 46.70 ಕೋಟಿ ರೂ. ಸಾಲ ಪಡೆದಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ತಮ್ಮ ಅತ್ತಿಗೆ ಹಾಗೂ ನಟ ಚಿರಂಜೀವಿ ಅವರ ಪತ್ನಿ ಸುರೇಖಾ ಅವರಿಂದಲೂ ಸುಮಾರು 2 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಲಾಗಿದೆ.
