ವಿವಾದದ ಬೆನ್ನಲ್ಲೇ ʼಸರ್ಸೆ ನಿನ್ನ ಸೆರಗ ಸರ್ಸೆʼ ಹಿಂದಿ ವರ್ಷನ್ ಡಿಲೀಟ್

Untitled design 2026 03 17T194617.598

ಚಿತ್ರರಂಗದಲ್ಲಿ ಗ್ಲಾಮರ್ ಮತ್ತು ಸಾಹಿತ್ಯದ ನಡುವಿನ ಗೆರೆ ದಾಟಿದಾಗ ಉಂಟಾಗುವ ಪರಿಣಾಮಕ್ಕೆ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಸಾಕ್ಷಿಯಾಗಿದೆ. ಬಾಲಿವುಡ್ ಬೆಡಗಿ ನೋರಾ ಫತೇಹಿ ಮತ್ತು ಹಿರಿಯ ನಟ ಸಂಜಯ್ ದತ್ ಅಭಿನಯದ ಈ ಹಾಡು ಈಗ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಚಿತ್ರತಂಡವು ಹಾಡಿನ ಹಿಂದಿ ಆವೃತ್ತಿಯನ್ನು (Sarke Chunar Teri) ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ಡಿಲೀಟ್ ಮಾಡಿದೆ.

ವಿವಾದಕ್ಕೆ ಕಾರಣವೇನು ?

ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಆದರೆ, ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಿಸಲಾದ ದೃಶ್ಯಗಳು ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವಾಗಿ ನೋರಾ ಫತೇಹಿ ಅವರು ಸೀರೆಯ ಸೆರಗನ್ನು ಪದೇ ಪದೇ ಕೆಳಕ್ಕೆ ಹಾಕಿ ಮತ್ತೆ ಎತ್ತುವ ದೃಶ್ಯಗಳು ಅಸಭ್ಯ ಮತ್ತು ಅಶ್ಲೀಲವಾಗಿವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿವಾದ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ. ವಕೀಲ ವಿನೀತ್ ಜಿಂದಾಲ್ ಅವರು ಸೆನ್ಸಾರ್ ಮಂಡಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ನೀಡಿದ ದೂರಿನಲ್ಲಿ, ಈ ಹಾಡು ಅಪ್ರಾಪ್ತ ವಯಸ್ಕರಿಗೂ ಲಭ್ಯವಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ನಟಿ ಕಂಗನಾ ರಣಾವತ್, ಗಾಯಕ ಅರ್ಮಾನ್ ಮಲಿಕ್ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಂತಹ ಗಣ್ಯರು ಈ ಹಾಡಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಸಿನಿಮಾದ ಹೆಸರಿನಲ್ಲಿ ಅಸಭ್ಯತೆಯನ್ನು ಮಾರಾಟ ಮಾಡಬಾರದು ಎಂದು  ಕಿಡಿಕಾರಿದ್ದಾರೆ.

ಹಿಂದಿ ಆವೃತ್ತಿ ಡಿಲೀಟ್: ಕನ್ನಡದ ಕಥೆಯೇನು ?

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ( ಮಾರ್ಚ್‌ 17) ಯೂಟ್ಯೂಬ್‌ನಿಂದ ಈ ಹಾಡಿನ ಹಿಂದಿ ವರ್ಷನ್ ಅನ್ನು ತೆಗೆದುಹಾಕಲಾಗಿದೆ. ಆದರೆ, ಮೂಲ ಕನ್ನಡ ಆವೃತ್ತಿ ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಈ ಹಾಡು ಇನ್ನೂ ಲಭ್ಯವಿದೆ. ನಾನು ಕೇವಲ ಕನ್ನಡ ಸಾಹಿತ್ಯವನ್ನು ಹಿಂದಿಗೆ ಅನುವಾದ ಮಾಡಿದ್ದೇನೆ ಅಷ್ಟೇ, ಇದರಲ್ಲಿ ನನ್ನ ತಪ್ಪಿಲ್ಲ ಎಂದು ಹಿಂದಿ ಗೀತರಚನೆಕಾರ ರಕೀಬ್ ಆಲಂ ಸಮರ್ಥಿಸಿಕೊಂಡಿದ್ದಾರೆ. ಇದು ಕನ್ನಡ ಸಾಹಿತ್ಯದ ಮೇಲಿನ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.

Exit mobile version