ಮೊರಾಕ್ಕೊ ಸೋತಿದ್ದಕ್ಕೆ ಮೈದಾನದಲ್ಲೇ ಕಣ್ಣೀರು ಹಾಕಿದ ನೋರಾ ಫತೇಹಿ: ವಿಡಿಯೋ ವೈರಲ್

ಟಾ (5)

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಮೊರಾಕ್ಕೊ ಸೋತಿದ್ದಕ್ಕೆ ಮೈದಾನದಲ್ಲೇ ನಟಿ ಹಾಗೂ ನೃತ್ಯ ತಾರೆ ನೋರಾ ಫತೇಹಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ. 

ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ತಂಡ ಫ್ರಾನ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ನೋರಾ ಫತೇಹಿ ಭಾವುಕರಾಗಿ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪಂದ್ಯ ವೀಕ್ಷಿಸುವ ವೇಳೆ ಮೊರಾಕ್ಕೊ ತಂಡದ ಕೆಂಪು ಬಣ್ಣದ ಜೆರ್ಸಿ ಧರಿಸಿ ತಂಡಕ್ಕೆ ಬೆಂಬಲ ನೀಡುತ್ತಿದ್ದ ನೋರಾ, ಸೋಲಿನ ಬಳಿಕ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಕಣ್ಣೀರಿಟ್ಟಿದ್ದಾರೆ.

ವಿಡಿಯೋದಲ್ಲಿ ನೋರಾ ಫತೇಹಿ ತಮ್ಮ ತಂಡದ ಸೋಲಿನಿಂದ ಬೇಸರಗೊಂಡಿರುವುದು ಕಾಣಿಸುತ್ತದೆ. ಈ ವೇಳೆ ಅವರ ಸ್ನೇಹಿತರೊಬ್ಬರು ನಟಿಯನ್ನು ಸಮಾಧಾನಪಡಿಸುವ ದೃಶ್ಯವೂ ಕಂಡುಬಂದಿದೆ. ಈ ವಿಡಿಯೋ ವೈರಲ್ ಆದ ಬಳಿಕ ಅಭಿಮಾನಿಗಳು ನೋರಾ ಅವರ ಕ್ರೀಡಾಭಿಮಾನ ಮತ್ತು ಮೊರಾಕ್ಕೊ ಮೇಲಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋರಾ ಫತೇಹಿಗೆ ಫುಟ್ಬಾಲ್ ಹಾಗೂ ಫಿಫಾ ವಿಶ್ವಕಪ್ ಜೊತೆ ವಿಶೇಷ ನಂಟಿದೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವಕಪ್ 2026 ಉದ್ಘಾಟನಾ ಸಮಾರಂಭದಲ್ಲಿ ಅವರು ತಮ್ಮ ‘ಸಿಯರ್ ಸಿಯರ್’ (Cœur Cœur) ಹಾಡಿನ ಮೂಲಕ ವಿಶೇಷ ಪ್ರದರ್ಶನ ನೀಡಿದ್ದರು. ಫ್ರೆಂಚ್ ಗಾಯಕ ವೆಗೆಡ್ರೀಮ್ ಹಾಗೂ ಸಂಗೀತ ನಿರ್ಮಾಪಕ ಸನ್‌ಜಾಯ್ ಅವರ ಸಹಯೋಗದಲ್ಲಿ ಈ ಹಾಡು ಮೂಡಿಬಂದಿದ್ದು, ಬಿಡುಗಡೆಯಾದ ಬಳಿಕ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

ಫಿಫಾ ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ನೋರಾ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನೂ ಪ್ರತಿನಿಧಿಸಿದ್ದರು. ಸಂಗೀತ, ನೃತ್ಯ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಅವರು, ಕ್ರೀಡಾ ಕ್ಷೇತ್ರದ ಮೇಲಿನ ತಮ್ಮ ಆಸಕ್ತಿಯನ್ನೂ ಹಲವು ಬಾರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೋರಾ ಫತೇಹಿ, ಮೊರಾಕ್ಕೊ ತಂಡಕ್ಕೆ ಭಾರತೀಯ ಅಭಿಮಾನಿಗಳಿಂದಲೂ ಅಪಾರ ಬೆಂಬಲ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಮೊರಾಕ್ಕೊ ತಂಡದ ಯಶಸ್ಸು ಮತ್ತು ಅದರ ಮೇಲಿನ ಜನರ ಪ್ರೀತಿ ತಮ್ಮನ್ನು ಭಾವುಕರನ್ನಾಗಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು.

Exit mobile version