ನೋಡಿದ್ದು ಸುಳ್ಳಾಗಬಹುದು ಚಿತ್ರದ “ಕನಸುಗಳ ಮೆರವಣಿಗೆ” ಹಾಡು ಬಿಡುಗಡೆ!

"ನೋಡಿದ್ದು ಸುಳ್ಳಾಗಬಹುದು" ಚಿತ್ರದ ಮೊದಲ ಲಿರಿಕಲ್ ಹಾಡು!

1 (26)

ಬೆಂಗಳೂರು: ಅನಿಲ್ ಕುಮಾರ್ ಕೆ.ಆರ್. ನಿರ್ಮಾಣ ಮತ್ತು ನಾಯಕನಾಗಿ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ “ನೋಡಿದ್ದು ಸುಳ್ಳಾಗಬಹುದು” ಚಿತ್ರದ “ಕನಸುಗಳ ಮೆರವಣಿಗೆ” ಎಂಬ ಲಿರಿಕಲ್ ವಿಡಿಯೋ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಬರೆದಿದ್ದು, ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿದ್ದಾರೆ, ಮತ್ತು ಅನಿರುದ್ಧ್ ಶಾಸ್ತ್ರಿ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ನಿರ್ದೇಶಕ ವಿಜಯ್ ಚಲಪತಿ ಮಾತನಾಡಿ, “ನನಗೆ ಚಿತ್ರರಂಗದೊಂದಿಗೆ ಸುಮಾರು ಹತ್ತು ವರ್ಷಗಳಿಂದ ನಂಟಿದೆ. ‘ಪೊಗರು’ ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕ ಅನಿಲ್ ಕುಮಾರ್ ಅವರಿಗೆ ಧನ್ಯವಾದ. ಚಿತ್ರದ ಶೀರ್ಷಿಕೆಯ ಕುತೂಹಲಕ್ಕೆ ಕಾರಣ ಚಿತ್ರವನ್ನು ನೋಡಿದಾಗ ತಿಳಿಯುತ್ತದೆ. ಇದು ನೈಜ ಘಟನೆಯಾಧಾರಿತ ಕಥೆ.

ಚಿತ್ರೀಕರಣ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಪ್ರಥಮ ಪ್ರತಿ ಸಿದ್ಧವಾಗಲಿದೆ. ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಒಟ್ಟು ನಾಲ್ಕು ಹಾಡುಗಳಿದ್ದು, ಗುಮ್ಮಿನೆನಿ ವಿಜಯ್ ಮತ್ತು ಮಿಹಿರಾಮ್ಸ್ ತಲಾ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಿಹಿರಾಮ್ಸ್ ನೀಡಿದ್ದಾರೆ. ಕೆ.ವಿ. ಕಿರಣ್ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಪ್ರಭು ನೃತ್ಯ ನಿರ್ದೇಶನ, ಮತ್ತು ನರಸಿಂಹ ಮಾಗಡಿ ಸಾಹಸ ನಿರ್ದೇಶನವನ್ನು ನಿರ್ವಹಿಸಿದ್ದಾರೆ,” ಎಂದು ನಿರ್ದೇಶಕ ವಿಜಯ್ ಚಲಪತಿ ತಿಳಿಸಿದರು.

ನಾಯಕ ಮತ್ತು ನಿರ್ಮಾಪಕ ಅನಿಲ್ ಕುಮಾರ್ ಕೆ.ಆರ್. ಮಾತನಾಡಿ, “ನಾನು ಚಿಕ್ಕಬಳ್ಳಾಪುರದವನು, ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿಯಿತ್ತು. ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ. ಗೆಳೆಯ ಅಕ್ಷಯ್ ಮೂಲಕ ವಿಜಯ್ ಚಲಪತಿ ಪರಿಚಯವಾದರು. ಚಿತ್ರದ ಕಥೆ ಮತ್ತು ಶೀರ್ಷಿಕೆ ಇಷ್ಟವಾಯಿತು. ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ ಮತ್ತು ಚಿತ್ರವನ್ನು ನಿರ್ಮಿಸಿದ್ದೇನೆ. ಇಂದು ನಮ್ಮ ಮೊದಲ ಹಾಡು ಬಿಡುಗಡೆಯಾಗಿದ್ದು, ಗಣ್ಯರಿಗೆ ಧನ್ಯವಾದ,” ಎಂದರು.

ಚಿತ್ರದಲ್ಲಿ ಶ್ರೀಕಾಂತ್, ಪ್ರಿಯ ತರುಣ್, ಗಣೇಶ್ ರಾವ್ ಕೇಸರ್ಕರ್, ಮತ್ತು ಛಾಯಾಗ್ರಾಹಕ ಕೆ.ವಿ. ಕಿರಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮಾತನಾಡಿದರು. ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಮತ್ತು ತೆಲುಗು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Exit mobile version