ಅನ್ನ ತಿಂದ ಮನೆಗೆ ದ್ರೋಹ ಬಗೆಯೋ ಕಾರ್ಯ ಮಾಡ್ತಿದ್ದಾರೆ ಬಿಗ್‌ಬಾಸ್ ಸ್ಪರ್ಧಿ ಡಾಗ್ ಸತೀಶ್. ಹೌದು.. ತಮ್ಮ ಅರಕಲು, ಮುರಕಲು ಸ್ಟೇಟ್‌ಮೆಂಟ್‌ಗಳಿಂದ ಸುದೀಪ್ ಹಾಗೂ ಅವ್ರ ಫ್ಯಾನ್ಸ್‌ನ ಕೆರಳುವಂತೆ ಮಾಡಿದ್ದಾರೆ ಡಾಗ್ ಸತ್ಯ. ಬಾಯಿ ಬಿಟ್ರೆ ಬಿಲ್ಡಪ್, ಹೊಲಸು ಮಾತಾಡೋ ಆಸಾಮಿಗೆ ಬುಜ್ಜಿ ರಜತ್ ಹಾಗೂ ಕಿಚ್ಚ ಫ್ಯಾನ್ಸ್ ಗ್ರಹಚಾರ ಬಿಡಿಸೋ ಕಾರ್ಯ ಮಾಡಿದ್ದಾರೆ. ಇಷ್ಟಕ್ಕೂ ಅಂಥದ್ದೇನಾಯ್ತು..? ಪೊಲೀಸ್ ಸ್ಟೇಷನ್ ಮೆಟ್ಟಿಲೇರುವಂಥದ್ದು ಏನಾಯ್ತು ಅಂತೀರಾ..? ಈ ಸ್ಟೋರಿ ನೋಡಿ.
- ಡಾಗ್ ಸತೀಶ್ ಹೊಸ ವಿವಾದ.. ಸುದೀಪ್ ಫ್ಯಾನ್ಸ್ ಆಕ್ರೋಶ
- ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್ಗೆ ರಜತ್ ವಾರ್ನಿಂಗ್..!
- ಡಾಗ್ ಸತೀಶ್ಗೆ ಒದೆ ಬೀಳುತ್ತೆ ಅಂದಿದ್ಯಾಕೆ ಬುಜ್ಜಿ ರಜತ್..?
- ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ ಸುದೀಪಿಯನ್ಸ್
ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಡಾಗ್ ಸತೀಶ್ ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಶೋ ಮುಗಿದ ಬಳಿಕ ಅವರ ಹೇಳಿಕೆಗಳು, ಸ್ವಹೊಗಳಿಕೆ, ತೋರಿಕೆಯ ಸಿರಿವಂತಿಕೆ ಮತ್ತು ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್ ಗೆ ಆಹಾರವಾಗಿದ್ದವು. ಆದರೆ ಇತ್ತೀಚೆಗೆ ಡಾಗ್ ಸತೀಶ್ ಕಿಚ್ಚ ಸುದೀಪ್ ಅವರನ್ನು ಕಿಚಾಯಿಸಲು ಮಾಡಿದ ಪ್ರಯತ್ನ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಿಚ್ಚ ಸುದೀಪ್ ಹಾಡನ್ನು ಬೇಕಾಬಿಟ್ಟಿ ಎಡಿಟ್ ಮಾಡಿ, ಶೌಚಾಲಯದ ವಿಡಿಯೋಗೆ ಹಾಕಿದ್ದಾರೆ. ಟಾಯ್ಲೆಟ್ ದೃಶ್ಯಕ್ಕೆ ಕಿಚ್ಚ ಸುದೀಪ್ ಹಾಡು ಬಳಸಿ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ನೋಡಿದ ಅಭಿಮಾನಿಗಳು ಇದು ಉದ್ದೇಶಪೂರ್ವಕ ಅವಮಾನ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುದೀಪ್ ಅಭಿಮಾನಿಗಳ ಸಿಟ್ಟು ತೀವ್ರಗೊಂಡಿದ್ದು, ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ಆಪ್ತರಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿರೋ ವಿನಯ್, “ಮೊದಲು ಹಾಡು ಡಿಲೀಟ್ ಮಾಡು” ಎಂದು ಗಟ್ಟಿಯಾಗಿ ಹೇಳಿದ್ದರೆ, ರಜತ್ ಕೂಡ “ಸಾಂಗ್ ತೆಗೆದುಹಾಕು, ಇಲ್ಲ ಅಂದ್ರೆ ಕಾನೂನು ಕ್ರಮಕೈಗೊಳ್ಳುತ್ತೇವೆ ” ಎಂದು ವಾರ್ನಿಂಗ್ ನೀಡಿದ್ದಾರೆ. ಇವರ ಕಮೆಂಟ್‌ಗಳು ಇದೀಗ ವೈರಲ್ ಆಗಿದ್ದು, ವಿವಾದ ಮತ್ತಷ್ಟು ತೀವ್ರವಾಗಿದೆ.
ವಿವಾದ ಇಷ್ಟಕ್ಕೆ ನಿಲ್ಲದೇ, ರಜತ್ ಕಿಶನ್ ಹಾಗು ಕಿಚ್ಚ ಸುದೀಪ್ ಅಭಿಮಾನಿಗಳು ಬನಶಂಕರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟ ಕಿಚ್ಚ ಸುದೀಪ್ ಅವರಿಗೆ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿ ಡಾಗ್ ಸತೀಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಇಷ್ಟೇ ಅಲ್ಲದೆ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ಕೂಡ ರಜತ್ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದಾರೆ
ಒಟ್ಟಿನಲ್ಲಿ, ಕಿಚ್ಚ ಸುದೀಪ್ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿರುವ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈಗಾದ್ರೂ ಡಾಗ್ ಸತೀಶ್ ವಿಡಿಯೋ ಡಿಲೀಟ್ ಮಾಡ್ತಾರಾ..? ಕ್ಷಮೆ ಕೇಳ್ತಾರ..?ಈ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.