ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic Movie) ಬಿಡುಗಡೆಯತ್ತ ವೇಗವಾಗಿ ಸಾಗುತ್ತಿದೆ. ಈಗಾಗಲೇ ಸಿನಿಮಾ ಕುರಿತ ಕುತೂಹಲ ಪ್ರೇಕ್ಷಕರಲ್ಲಿ ತೀವ್ರವಾಗಿದ್ದು, ಪಾತ್ರಗಳ ಅನಾವರಣವೂ ಆ ಕುತೂಹಲ ಹೆಚ್ಚಿಸಿದೆ. ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಷಿ ಪಾತ್ರಗಳ ಫಸ್ಟ್ ಲುಕ್ ಹೊರಬಂದ ಬಳಿಕ ಇದೀಗ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಪಾತ್ರದ ಅನಾವರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಗಂಗಾ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇತ್ತು. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆ ಆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಪೋಸ್ಟರ್‌ನಲ್ಲಿ ನಯನತಾರಾ ಸಂಪೂರ್ಣ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಕೈಯಲ್ಲಿ ಶಾಟ್‌ಗನ್, ಕಣ್ಣುಗಳಲ್ಲಿ ದರ್ಪ ಸ್ಪಷ್ಟವಾಗಿ ಮೂಡಿಬಂದಿದೆ.
ಅರಮನೆಯ ಶೈಲಿಯ ಭವ್ಯ ಸೆಟ್‌ನಲ್ಲಿ ನಯನತಾರಾ ಎಂಟ್ರಿ ಕೊಡುತ್ತಿರುವ ದೃಶ್ಯದ ಪೋಸ್ಟರ್ ಗಮನ ಸೆಳೆದಿದೆ. ಈ ಲುಕ್ ನೋಡಿದ ಅಭಿಮಾನಿಗಳು “ಇದು ನಯನತಾರಾ ಮಾಸ್ ಕಂಬ್ಯಾಕ್” ಎಂದು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಹಿಳಾ ಪ್ರಧಾನ ಪಾತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ನಯನತಾರಾ, ಈ ಬಾರಿ ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿಸಿದೆ.
‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಚಿತ್ರದ ಕಥೆಯನ್ನು ನಟ ಯಶ್ ಅವರೇ ಗೀತು ಜೊತೆಗೂಡಿ ಸಹ-ಲೇಖನ ಮಾಡಿದ್ದಾರೆ. ಇದು ಯಶ್ ಅವರ ವಿಭಿನ್ನ ಪ್ರಯತ್ನಗಳಲ್ಲಿ ಒಂದಾಗಿದ್ದು, ಕಥೆ ಹಾಗೂ ಪಾತ್ರಗಳ ಆಯ್ಕೆ ಎಲ್ಲವೂ ವಿಭಿನ್ನವಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಪ್ರತಿಯೊಂದು ಪಾತ್ರದ ಪೋಸ್ಟರ್ ಕೂಡ ಕಲರ್‌ಫುಲ್ ಆಗಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿದೆ.
ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಇರುವುದರಿಂದ, ಆ ದಿನವೇ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಟೀಸರ್‌ಗೂ ಮುನ್ನ ಎಲ್ಲಾ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಪ್ಲ್ಯಾನ್ ತಂಡದಲ್ಲಿದ್ದು, ಒಂದೊಂದಾಗಿ ಪಾತ್ರಗಳ ಅನಾವರಣ ನಡೆಯುತ್ತಿದೆ. ಇದರಿಂದ ಚಿತ್ರದ ಮೇಲಿನ ಹೈಪ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಈದ್ ಹಾಗೂ ಯುಗಾದಿ ಹಬ್ಬದ ಸಂಭ್ರಮದ ನಡುವೆ ಸಿನಿಮಾ ತೆರೆಗೆ ಬರಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆಯುವ ನಿರೀಕ್ಷೆ ಇದೆ.
