ಸುದೀಪ್ ಚಿತ್ರದಲ್ಲಿ ಅವಕಾಶ ಕೊಡೋದಾಗಿ ವಂಚನೆ

ಉದಯೋನ್ಮುಖ ನಟನಿಂದ 22 ಲಕ್ಷ ಪೀಕಿದ ಡೈರೆಕ್ಟರ್

Web 2025 06 20t202224.178

ಬಾದ್‌ಷಾ ಸುದೀಪ್ ಹೆಸರು ಹೇಳಿಕೊಂಡು ಉದಯೋನ್ಮುಖ ನಟನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಸ್ಯಾಂಡಲ್‌ವುಡ್ ನಿರ್ದೇಶಕ ನಂದಕಿಶೋರ್. ಅದೀಗ ಅದು ಖ್ಯಾತ ದಿವಂಗತ ನಟ ಸುಧೀರ್ ಮಗನ ಕರಿಯರ್‌ಗೆ ಬಹುದೊಡ್ಡ ಕಪ್ಪು ಚುಕ್ಕೆ ಆಗ್ತಿದೆ. ಕ್ರಿಕೆಟ್, ಸಿನಿಮಾ ಆಫರ್ ಹೆಸರಲ್ಲಿ ನುಂಗಿದ್ದೆಷ್ಟು ಲಕ್ಷ.

ದೇವರನ್ನ ಕಾಣೋಕೆ ಭಕ್ತನೊಬ್ಬ ಪೂಜಾರಿಗೆ ಕೊಟ್ಟ ಲಂಚ ಬರೋಬ್ಬರಿ 22 ಲಕ್ಷ. ಹೌದು.. ಶಬರೀಶ್ ಶೆಟ್ಟಿ ಅನ್ನೋ ಸುದೀಪ್ ಕಟ್ಟಾಭಿಮಾನಿ, ನಟ ಸುದೀಪ್ ಚಿತ್ರದಲ್ಲಿ ನಟಿಸಿ, ಅವರಿಗೆ ಹತ್ತಿರ ಆಗೋಕೆ ನಿರ್ದೇಶಕ ನಂದಕಿಶೋರ್‌ಗೆ ನೀಡಿರೋ ಹಣ 22 ಲಕ್ಷ ಅಂದ್ರೆ ನೀವು ನಂಬಲೇಬೇಕು. ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಸಿನಿಮಾಗಳ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಮೇಲೆ ರಾಮಧೂತ ಚಿತ್ರದ ನಾಯಕನಟ ಶಬರೀಶ್ ಶೆಟ್ಟಿ 22 ಲಕ್ಷ ರೂಪಾಯಿ ವಂಚನೆ ಆರೋಪ ಮಾಡಿದ್ದಾರೆ.

2016ರಲ್ಲಿ ಜಿಮ್‌‌ನಲ್ಲಿ ಪರಿಚಯವಾದ ನಂದಕಿಶೋರ್‌ಗೆ ಮೊದಲಿಗೆ 3 ಲಕ್ಷ, ನಂತ್ರ ಚಿನ್ನ ಅಡವಿಟ್ಟು 19 ಲಕ್ಷ ರೂಪಾಯಿಗಳನ್ನ ಹಂತ ಹಂತವಾಗಿ ನೀಡಿದ್ದಾರೆ ಉದಯೋನ್ಮುಖ ನಟ ಶಬರೀಶ್. ಅದನ್ನ ಕೇಳಲು ಹೋದಾಗ ಧಮ್ಕಿ ಹಾಕಿ ಬಾಯಿ ಮುಚ್ಚಿಸಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಜೊತೆ ನಟಿಸೋಕೆ ಅವಕಾಶ ಕೊಡಿಸ್ತೀನಿ ಅಂತ ಯಾಮಾರಿಸ್ತಾ ಬಂದಿದ್ದಾರೆ. ಸಿಸಿಎಲ್‌‌ ಕನಸು ಕಂಡಿದ್ದ ಶಬರೀಶ್ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‌‌ನಲ್ಲಿ ಆಡುವುದಕ್ಕೆ ತೃಪ್ತರಾಗಿದ್ದಾರೆ.  ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಇನ್ನೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳೋಕೆ ಹೆಣಗಾಡ್ತಿರೋ ಶಬರೀಶ್, ರಾದ್ದಾಂತ ಮಾಡಿ, ದೊಡ್ಡವರನ್ನ ಎದುರು ಹಾಕ್ಕೊಳ್ಳುವುದು ಬೇಡ ಅಂತ 9 ವರ್ಷಗಳಿಂದ ಹಣಕ್ಕಾಗಿ ಶಬರಿಯಂತೆ ಕಾದರು. ಆದ್ರೀಗ ಸುದೀಪ್, ಶಿವಣ್ಣ ಬಳಿ ಹೋಗ್ತೀನಿ, ಫಿಲ್ಮ್ ಚೇಂಬರ್‌ಗೆ ಕಂಪ್ಲೆಂಟ್ ನೀಡ್ತೀನಿ ಅಂದಾಗ, ಇಷ್ಟು ವರ್ಷಗಳಿಂದ ಕಾದ ನೀವು ಇನ್ನೊಂದೆರಡು ಮೂರು ದಿನ ಕಾಯಿರಿ ಅಪ್ಪಾಯಿ, ನಮ್ಮ ತಾಯಾಣೆ ಬರ್ತೀನಿ. ಬೆಂಗಳೂರಿಗೆ ಬಂದು ಹಣ ಸಮೇತ ನಿಮ್ಮನ್ನು ಕರೆಸಿಕೊಳ್ತೀನಿ ಅಂತ ಅಂಗಲಾಚಿದ್ದಾರೆ ನಂದಕಿಶೋರ್.

ಮೋಹನ್‌ಲಾಲ್ ಜೊತೆ ವೃಷಭ ಅನ್ನೋ ತೆಲುಗು- ಮಲಯಾಳಂ ದ್ವಿಭಾಷಾ ಚಿತ್ರ ನಿರ್ದೇಶನ ಮಾಡ್ತಿರೋ ನಂದಕಿಶೋರ್, ಸದ್ಯ ಬೆಂಗಳೂರಿನಲ್ಲಿಲ್ಲ. ಇಲ್ಲಿ ನಟ ಸುದೀಪ್ ಹೆಸರು ತಳುಕು ಹಾಕಿಕೊಂಡಿರೋದ್ರಿಂದ ಇದು ಮಾತುಕತೆ ಮೂಲಕ ಬಗೆಹರಿಯುತ್ತಾ ಅಥ್ವಾ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Exit mobile version