ಮುಂಬೈ: ‘ಧುರಂಧರ್’ ಚಿತ್ರದಲ್ಲಿ ನಟಿಸಿದ್ದ ನಟ ನದೀಮ್ ಖಾನ್ ಅವರ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಸುಮಾರು ಹತ್ತು ವರ್ಷಗಳ ಕಾಲ ತನ್ನ ಮನೆಯ ಕೆಲಸದಾಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಡಿ ನಟನನ್ನ ಪೊಲೀಸರು ಬಂಧಿಸಿದ್ದಾರೆ.
ದೂರುದಾರ ಮಹಿಳೆಯು 41 ವರ್ಷದವರಾಗಿದ್ದು, ಆಕೆ ಕಳೆದ ಒಂದು ದಶಕದಿಂದ ನದೀಮ್ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. 2015 ರಲ್ಲಿ ಮೊದಲ ಬಾರಿಗೆ ನದೀಮ್ ಅವರ ಪರಿಚಯವಾದಾಗ, ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹವನ್ನು ದುರುಪಯೋಗಪಡಿಸಿಕೊಂಡ ನಟ, ತಾನು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಆದ್ದರಿಂದ ಮಹಿಳೆ ನಟನೊಂದಿಗೆ ದೈಹಿಕ ಸಂಬಂಧಕ್ಕೆ ಸಮ್ಮತಿಸಿದ್ದರು.
ಹೀಗೆ ಈ ಸಂಬಂಧವು ಸುಮಾರು 10 ವರ್ಷಗಳ ಕಾಲ ಮುಂದುವರೆದುಕೊಂಡು ಬಂದಿದೆ. ನಟ ನದೀಮ್ ಖಾನ್ ಹಾಗೂ ಆ ಮಹಿಳೆ , ವರ್ಸೋವಾದಲ್ಲಿನ ನದೀಮ್ ಹಾಗೂ ಮಾಲ್ವಾನಿ ಪ್ರದೇಶದಲ್ಲಿರುವ ಮಹಿಳೆಯ ಮನೆಯಲ್ಲಿ ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿದ್ದರು. ಪ್ರತಿ ಬಾರಿಯೂ ಮದುವೆಯ ವಿಷಯ ಪ್ರಸ್ತಾಪವಾದಾಗ, ನಟ ಯಾವುದೋ ಒಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದ. ಇತ್ತೀಚೆಗೆ ಮಹಿಳೆ ಮದುವೆಗಾಗಿ ಒತ್ತಾಯಿಸಿದಾಗ, ನಟ ನೇರವಾಗಿ ನಿರಾಕರಿಸಿದ್ದಾರೆ. ಹೀಗಾಗಿ ನಟನ ವಿರುದ್ದ ದೂರು ದಾಕಲಿಸಿದ್ದಾಳೆ.
ಸಂತ್ರಸ್ತೆ ಮೊದಲು ವರ್ಸೋವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದರು. ಆದರೆ, ಘಟನೆಯು ಮೊದಲ ಬಾರಿಗೆ ಮಾಲ್ವಾನಿ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ವರ್ಸೋವಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಮಾಲ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಿದರು.
ಮಾಲ್ವಾನಿ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ದೂರುದಾರ ಮಹಿಳೆ , ನಾನು ಅವನನ್ನು ಪೂರ್ಣವಾಗಿ ನಂಬಿದ್ದೆ. ಮದುವೆಯಾಗುತ್ತಾನೆಂಬ ಭರವಸೆಯಲ್ಲೇ ಈ ಸಂಬಂಧದಲ್ಲಿ ಮುಂದುವರಿದಿದ್ದೆ. ಆದರೆ ಅವನು ನನ್ನ ಬದುಕಿನೊಂದಿಗೆ ಆಟವಾಡಿದ್ದಾನೆ ಎಂದು ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಪ್ರಸ್ತುತ ನಟ ನದೀಮ್ ಖಾನ್ ಪೊಲೀಸ್ ಕಸ್ಟಡಿಯಲ್ಲಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಸಾಕ್ಷ್ಯಾಧಾರಗಳ ಸಂಗ್ರಹಣೆ ನಡೆಯುತ್ತಿದೆ.





