ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕ ಮತ್ತು ನೃತ್ಯಗಾರ, ‘ಮೂನ್‌ವಾಕ್’ ಮಾಂತ್ರಿಕ ಮೈಕಲ್ ಜಾಕ್ಸನ್ ಅವರ ಹೆಸರು ಕೇಳದವರೇ ಇಲ್ಲ. ಮೈಕಲ್ ಜಾಕ್ಸನ್ ಅವರ ಜೀವನವು ಕೇವಲ ಯಶಸ್ಸಿನ ಕಥೆಯಲ್ಲ, ಅದು ಅವರ ಅಪಾರ ನೋವಿನ ಮತ್ತು ವಿವಾದ, ನಿಗೂಢತೆಗಳ ಸಮ್ಮಿಶ್ರಣ. ಅವರ ಸಾಧನೆಗಿಂತ ಹೆಚ್ಚಾಗಿ ಅವರ ಶರೀರದಲ್ಲಾದ ಬದಲಾವಣೆಗಳೇ ದೊಡ್ಡ ಮಟ್ಟದಲ್ಲಿ ಚರ್ಚೆಯಾದವು.
ಮೈಕಲ್ ಜಾಕ್ಸನ್ ಬಿಳಿಯಾಗಲು ಶಸ್ತ್ರಚಿಕಿತ್ಸೆ ಮಾಡಿಕೊಂಡ್ರಾ? ತನ್ನ ದೇಹವನ್ನೇ ಪ್ರಯೋಗಶಾಲೆ ಮಾಡಿಕೊಂಡರು ಎಂಬ ಅನೇಕ ವದಂತಿಗಳು ಕೇಳಿ ಬಂದಿವೆ. ಇಂಡಿಯಾನಾದ ಬಡ ಕುಟುಂಬದಲ್ಲಿ ಹುಟ್ಟಿ, ಇಡೀ ಜಗತ್ತನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸಿದ ಈ ಮಹಾನ್ ಕಲಾವಿದನ ಬದುಕು ಕೊನೆಗೊಂಡಿದ್ದು ಮಾತ್ರ ಅತ್ಯಂತ ದುರಂತಮಯವಾಗಿ. ಆದರೆ ಇದರ ಹಿಂದಿನ ಅಸಲಿ ಕಥೆಯೇ ಬೇರೆ.
ಮೈಕಲ್ ಜಾಕ್ಸನ್ ಬಾಲ್ಯದ ಕರಾಳ ದಿನಗಳು :
1958ರಲ್ಲಿ ಜನಿಸಿದ ಮೈಕಲ್, ಹತ್ತು ಮಕ್ಕಳ ಕುಟುಂಬದಲ್ಲಿ ಎಂಟನೆಯವರು. ಬಾಲಕನಾಗಿದ್ದಾಗಲೇ ‘ಜಾಕ್ಸನ್ 5’ ತಂಡದ ಮೂಲಕ ಖ್ಯಾತಿ ಪಡೆದರು. ಆದರೆ ಈ ಯಶಸ್ಸಿನ ಹಿಂದೆ ಅವರ ತಂದೆ ಜೋ ಜಾಕ್ಸನ್ ನೀಡುತ್ತಿದ್ದ ಅತಿಯಾದ ದೈಹಿಕ ಮತ್ತು ಮಾನಸಿಕ ಕಿರುಕುಳವಿತ್ತು. ತಪ್ಪು ಮಾಡಿದರೆ ಚಾಟಿ ಏಟು ನೀಡುವುದು ಮತ್ತು ಅವಮಾನಿಸುವುದು ಮೈಕಲ್ ಮನಸ್ಸಿನ ಮೇಲೆ ಆಳವಾದ ಗಾಯ ಮಾಡಿತು. ಇದೇ ಅವರು ಪದೇ ಪದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಂದು ಕಾರಣವಾಯಿತು ಎನ್ನಲಾಗುತ್ತದೆ.
ಮೈಕಲ್ ಜಾಕ್ಸನ್ ಚರ್ಮದ ಬಣ್ಣ ಬದಲಾಗಿದ್ದು ಯಾಕೆ?
ಮೈಕಲ್ ಜಾಕ್ಸನ್ ಕಪ್ಪಗಿದ್ದವರು ಬಿಳಿಯಾದದ್ದು ಕೇವಲ ಸೌಂದರ್ಯಕ್ಕಾಗಿ ಅಲ್ಲ. ಅವರಿಗೆ ‘ವಿಟಿಲಿಗೋ’ (Vitiligo) ಎಂಬ ಚರ್ಮದ ಕಾಯಿಲೆ ಇತ್ತು. ಇದರಿಂದ ದೇಹದ ಮೇಲೆ ಬಿಳಿ ಮಚ್ಚೆಗಳಾಗುತ್ತಿದ್ದವು. ಕಪ್ಪು ಮತ್ತು ಬಿಳಿ ಚರ್ಮದ ನಡುವಿನ ವ್ಯತ್ಯಾಸವನ್ನು ಮುಚ್ಚಿಡಲು ಅವರು ಮೇಕಪ್ ಮೊರೆ ಹೋಗಬೇಕಾಯಿತು. ನಂತರ ವೈದ್ಯರ ಸಲಹೆಯಂತೆ ಚರ್ಮವನ್ನು ಏಕರೂಪವಾಗಿ ಕಾಣುವಂತೆ ಮಾಡಲು ‘ಡಿಪಿಗ್ಮೆಂಟೇಶನ್’ ಚಿಕಿತ್ಸೆ ಪಡೆದರು.
ಮೈಕಲ್ ಜಾಕ್ಸನ್ ಪ್ಲಾಸ್ಟಿಕ್ ಸರ್ಜರಿ :
ಮೈಕಲ್ ಜಾಕ್ಸನ್ ಕೇವಲ ಸುಂದರವಾಗಿ ಕಾಣಲು ಸರ್ಜರಿ ಮಾಡಿಸಿಕೊಳ್ಳಲಿಲ್ಲ. 1984ರಲ್ಲಿ ‘ಪೆಪ್ಸಿ’ ಜಾಹೀರಾತಿನ ಚಿತ್ರೀಕರಣದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಅವರ ತಲೆ ಮತ್ತು ಮುಖಕ್ಕೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಆ ಗಾಯಗಳನ್ನು ಸರಿಪಡಿಸಲು ಮತ್ತು ನೋವನ್ನು ತಡೆಯಲು ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಇದು ಅವರ ಮುಖದ ಆಕಾರದಲ್ಲಿ ಬದಲಾವಣೆ ತಂದಿತು.
ಮೈಕಲ್ ಜಾಕ್ಸನ್ ನೋವಿನ ಇತಿಹಾಸ :
ಚಿಕ್ಕ ವಯಸ್ಸಿನಲ್ಲೇ ಅವರ ತಂದೆ ಜೋ ಜಾಕ್ಸನ್ ಅವರಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸಿದ್ದರು. ತನ್ನ ಮೂಗು ದೊಡ್ಡದಿದೆ ಎಂದು ತಂದೆ ಹೀಯಾಳಿಸುತ್ತಿದ್ದದ್ದು ಅವರಲ್ಲಿ ಕೀಳರಿಮೆ ಮೂಡಿಸಿತ್ತು. ಇದು ಅವರು ಪದೇ ಪದೇ ಮೂಗಿನ ಸರ್ಜರಿ (Rhinoplasty) ಮಾಡಿಸಿಕೊಳ್ಳಲು ಪ್ರೇರೇಪಿಸಿತು ಎನ್ನಲಾಗುತ್ತದೆ.
ಕೊನೆಯ ದಿನಗಳ ದುರಂತ ಅಂತ್ಯ :
ಯಶಸ್ಸಿನ ಶಿಖರದಲ್ಲಿದ್ದಾಗಲೇ ಜಾಕ್ಸನ್ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದವು. ಕೋರ್ಟ್‌ನಿಂದ ಅವರು ನಿರ್ದೋಷಿ ಎಂದು ಸಾಬೀತಾದರೂ, ಮಾನಸಿಕವಾಗಿ ಅವರು ಕುಗ್ಗಿಹೋಗಿದ್ದರು. 2009ರಲ್ಲಿ ‘This Is It’ ಸಂಗೀತ ಕಾರ್ಯಕ್ರಮದ ಮೂಲಕ ಮರಳಿ ಬರಲು ಸಿದ್ಧರಾಗಿದ್ದಾಗಲೇ ಮೈಕಲ್ ಜಾಕ್ಸನ್ ಜೂನ್ 25 ರಂದು 50 ವರ್ಷದ ವಯಸ್ಸಿನಲ್ಲಿ ನಿಧನರಾದರು. ಅತಿಯಾದ ಔಷಧ ಸೇವನೆಯಿಂದ (Propofol Intoxication) ಅವರ ಸಾವು ಸಂಭವಿಸಿತು, ಇದನ್ನು ‘ಕೊಲೆ’ ಎಂದು ಪರಿಗಣಿಸಿ ಅವರ ವೈದ್ಯರಿಗೆ ಶಿಕ್ಷೆ ವಿಧಿಸಲಾಯಿತು.
