ಖ್ಯಾತ ನಿರ್ದೇಶಕ ಡಾ ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು-ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ “ಮಾರುತ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ.
ಹೆಸರಾಂತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣದಲ್ಲಿ, ಸದಭಿರುಚಿ ಚಿತ್ರಗಳ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ, ತಮ್ಮ ಅಮೋಘ ನಟನೆಯ ಮೂಲಕ ಜನಮನಸೂರೆಗೊಂಡಿರುವ ದುನಿಯಾ ವಿಜಯ್ ಹಾಗೂ ಉತ್ಸಾಹಿ ಯುವನಟ ಶ್ರೇಯಸ್ ಮಂಜು ಅವರ ಸಮಾಗಮದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ “ಮಾರುತ” ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿರುವ “ಮಾರುತ” ಚಿತ್ರಕ್ಕೆ ಎಸ್ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿದೆ. ಸಂಗೀತ ಸಂಯೋಜನೆಯನ್ನು ಎಸ್ ನಾರಾಯಣ್ ಅವರೆ ಮಾಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.