ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರ ಕುಟುಂಬದ ಕಾರು ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಈ ದುರ್ಘಟನೆಯಲ್ಲಿ ಅವರ ತಂದೆ ಸಿಪಿ ಚಾಕೊ (70) ಸ್ಥಳದಲ್ಲೇ ನಿಧನರಾಗಿದ್ದಾರೆ. ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರಂತ ಶುಕ್ರವಾರ (ಜೂನ್ 6) ಮುಂಜಾನೆ 7 ಗಂಟೆ ಸುಮಾರಿಗೆ ತಮಿಳುನಾಡಿನಲ್ಲಿ ಸಂಭವಿಸಿದೆ.ಶೈನ್ ಟಾಮ್ ಚಾಕೊ ತಮ್ಮ ತಂದೆಯ ವೈದ್ಯಕೀಯ ತಪಾಸಣೆಗಾಗಿ ತ್ರಿಷುರ್ನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು 80-100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವಾಗ, ಎದುರಿಗೆ ಬಂದ ಟ್ರಕ್ ಲೇನ್ ಬದಲಾಯಿಸಿದ ಕಾರಣ ಅಪಘಾತ ಸಂಭವಿಸಿತು ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಶೈನ್ ಅವರ ಎಡಗೈ ಮೂಳೆ ಮುರಿದಿದೆ.
ಅಪಘಾತದ ಬಳಿಕ ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಯನ್ನು ಧರ್ಮಪುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಮತ್ತು ಅಪಘಾತಗೊಂಡ ಕಾರಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಆರೋಗ್ಯದ ಕುರಿತು ಇತ್ತೀಚಿನ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಶೈನ್ ಟಾಮ್ ಚಾಕೊ ಇತ್ತೀಚೆಗೆ ಡ್ರಗ್ಸ್ ಸೇವನೆ ಆರೋಪದಡಿ ವಿವಾದಕ್ಕೆ ಸಿಲುಕಿದ್ದರು. ಕೆಲವು ನಟಿಯರು ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ವಿವಾದಗಳು ಮರೆಯಾಗುವ ಮುನ್ನವೇ ಈ ದುರಂತದ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ. ಶೈನ್ ಟಾಮ್ ಚಾಕೊ ಮಲಯಾಳಂ ಚಿತ್ರರಂಗದ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ.